

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಂಗಾರು ಹಂಗಾಮಿನ ಉತ್ತಮ ಫಸಲಿನಿಂದ ಖುಷಿಯಲ್ಲಿರುವ ರೈತ ಸಮುದಾಯ ಸೇರಿ ಎಲ್ಲರೂ ಸಂಭ್ರಮದಿಂದ ದೀಪಾವಳಿ ಹಬ್ಬದ ಆಚರಣೆಗೆ ಸಿದ್ಧತೆ ನಡೆಸಿದ್ದು, ಹಬಕ್ಕೆ ಅಗತ್ಯ ವಸ್ತುಗಳ ಖರೀದಿಯೂ ಜೋರಾಗಿದೆ.
ಸುಮಾರು ಒಂದು ವಾರದಿಂದಲೇ ಹಬ್ಬದ ಸಂಭ್ರಮ ನಗರದಲ್ಲಿ ಮನೆ ಮಾಡಿದ್ದು, ಮನೆ ಮತ್ತು ಅಂಗಡಿಗಳ ಸ್ವಚ್ಛತೆ ಕಾರ್ಯ ಭರದಿಂದ ಸಾಗಿವೆ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಜನಸಾಗರವೇ ಹರಿದು ಬರುತ್ತಿದೆ. ಹೂವು, ಹಣ್ಣು, ಹಣತೆ, ಅಲಂಕಾರಿಕ ವಸ್ತುಗಳು ಸೇರಿ ಎಲ್ಲ ವಸ್ತುಗಳ ದರ ಗಗನಕ್ಕೇರಿವೆ. ಆದಾಗ್ಯೂ ಜನರು ಕುಟುಂಬ ಸಮೇತರಾಗಿ ಆಗಮಿಸಿ ಬಟ್ಟೆ, ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಬಣ್ಣ ಬಣ್ಣದ ತರಹೇವಾರಿ ಆಕಾಶ ಬುಟ್ಟಿಗಳು, ಝಗಮಗಿಸುವ ಲೈಟಿನ ಸರ, ಬಗೆ ಬಗೆಯ ಹಣತೆಗಳು, ತೋರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಜನರನ್ನು ಆಕರ್ಷಿಸುತ್ತಿವೆ.
ಮಾರುಕಟ್ಟೆಯಲ್ಲಿ ಕೃತಕ ವಸ್ತುಗಳದ್ದೇ ಹಾವಳಿ ಹೆಚ್ಚಾದಂತೆ ಕಾಣುತ್ತಿದೆ. ಮೊದಲಿನ ದಿನಗಳಲ್ಲಿ ಅಲಂಕಾರಕ್ಕೆ ಹಣತೆ, ಹೂವು ಸೇರಿ ಎಲ್ಲದಕ್ಕೂ ನೈಸರ್ಗಿಕ ವಸ್ತುಗಳಿಗೇ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಆದರೆ ಇದೀಗ ಆಕರ್ಷಕವಾಗಿ ಕಾಣುವ, ಜನರನ್ನು ಆಕರ್ಷಿಸುವ ಕೃತಕ ವಸ್ತುಗಳ ದರ್ಬಾರ್ ಹೆಚ್ಚಿದ್ದು, ಜನರು ಅವುಗಳ ಖರೀದಿಗೆ ಹಾತೊರೆಯುತ್ತಿದ್ದಾರೆ.
ವಿನೂತನ ವಿನ್ಯಾಸದ ಹಣತೆಗಳ ಮಧ್ಯೆ ಮಣ್ಣಿನ ಹಣತೆಗಳು ಕಾಣೆಯಾದಂತಾಗಿವೆ. ಮೊದಲೆಲ್ಲ ಸಂಪೂರ್ಣ ಮಣ್ಣಿನ ಹಣತೆಗಳು ಕಾಣ ಸಿಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಖರೀದಿ ಮಾಡುವಲ್ಲಿ ಜನರು ಹಿಂದೆ ಬೀಳುತ್ತಿರುವ ಕಾರಣಕ್ಕೆ ತಯಾರಕರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಪ್ಲಾಸ್ಟಿಕ್, ಪಿಂಗಾಣಿ ಸೇರಿ ಇತರ ವಸ್ತುಗಳಿಂದ ತಯಾರಿಸಿದ ಹಣತೆಗಳಿಗೇ ಜನರು ಮಹತ್ವ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಮಣ್ಣಿನ ಹಣತೆಗಳು ಕಾಣದಂತಾಗಿವೆ.
ಆಕಾಶ ಬುಟ್ಟಿ ಆಕರ್ಷಣೆ: ದೀಪಾವಳಿ ಹಬ್ಬದ ಪ್ರಯುಕ್ತ ಆಕಾಶ ಬುಟ್ಟಿಗೆ ಬೇಡಿಕೆ ಹೆಚ್ಚಿದೆ. ಪ್ರತಿ ವರ್ಷ ಚೀನಾದ ಆಕಾಶಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದವು. ಈ ವರ್ಷ ದೇಸಿ ಆಕಾಶಬುಟ್ಟಿಗಳೇ ಹೆಚ್ಚಿರುವುದು ವಿಶೇಷ. ಹುಬ್ಬಳ್ಳಿ, ಮುಂಬೈ, ದೆಹಲಿ ಹಾಗೂ ಕಲ್ಕತ್ತಾದಿಂದ ಬಗೆ ಬಗೆಯ ವಿನೂತನ ವಿನ್ಯಾಸ ಆಕಾಶ ಬುಟ್ಟಿಗಳನ್ನು ತರಿಸಿ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ಹೊಸದಾಗಿ ಬಂದಿರುವ ಎಲ್ಇಡಿ ಆಕಾಶ ಬುಟ್ಟಿಗಳು ಜನರ ಗಮನ ಸೆಳೆಯುತ್ತಿದ್ದು, ಖರೀದಿಯೂ ಜೋರಾಗಿದೆ.