

ಹುಬ್ಬಳ್ಳಿ: ಹಿಂದುಗಳಿಗೆ ಯುಗಾದಿ ಹಬ್ಬ ಹೊಸ ವರ್ಷವಾದರೆ, ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಈ ಬಾರಿ ಒಂದೇ ಬಾರಿಗೆ ಬಂದಿವೆ. ಪರಿಣಾಮ ವಾಣಿಜ್ಯ ನಗರಿಯಾದ ಹುಬ್ಬಳ್ಳಿಯ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿವೆ.
ಇಲ್ಲಿಯ ದುರ್ಗದಬೈಲ್, ಜನತಾ ಬಜಾರ್, ಸಂಗೊಳ್ಳಿ ರಾಯಣ್ಣ ವೃತ್ತ, ಸಿಬಿಟಿ, ಹಳೇ ಹುಬ್ಬಳ್ಳಿ, ಕೇಶ್ವಾಪುರ ಇತರೆಡೆ ಮಾರುಕಟ್ಟೆ ತುಂಬೆಲ್ಲ ಜನದಟ್ಟಣೆ ಇದೆ. ಹೂವು, ಹಣ್ಣು, ಪೂಜಾ ಸಾಮಗ್ರಿ ಖರೀದಿ ಭರಾಟೆ ಜೋರಾಗಿದೆ.
ಒಂದು ಮಾರು ಸೇವಂತಿ ಹೂವಿಗೆ 70ರೂ., ಮಲ್ಲಿಗೆ ಹೂವು 90 ರೂ., ಒಂದು ಗುಲಾಬಿ ಹೂವು 10 ರೂ. ಬೆಲೆ ನಿಗದಿಪಡಿಸಲಾಗಿದೆ. ಬೇವಿನ ಹೂವು, ಮಾವಿನ ಎಲೆಗಳು ಗುಂಪಿಗೆ 15ರಿಂದ 20 ರೂ. ನಿಗದಿಪಡಿಸಲಾಗಿದೆ. ತರಕಾರಿ ಹಾಗೂ ಹಣ್ಣುಗಳ ಬೆಲೆಯೂ ಗಗಮನ ಮುಖಿಯಾಗಿದೆ. ಬೆಲೆ ಏರಿಕೆ ಲೆಕ್ಕಿಸದೇ ಮಾರುಕಟ್ಟೆಯಲ್ಲಿ ಜನ ಜಂಗುಳಿ ಕೂಡಿತ್ತು.
ಸಂಜೆ ದಟ್ಟಣೆ: ವರ್ಷದ ಮೊದಲ ಸೂರ್ಯಗ್ರಹಣವು ಅಮವಾಸ್ಯೆಯ ದಿನವಾದ ಶನಿವಾರವೇ ಇತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬೆಳಗಿನ ವೇಳೆ ಅಂಗಡಿಗಳಿಗೆ ತೆರಳಿ ಖರೀದಿ ಪ್ರಕ್ರಿಯೆ ನಡೆಸಲಿಲ್ಲ. ಸೂರ್ಯಗ್ರಹಣದ ಬಳಿಕ ಸಂಜೆ ವೇಳೆ ಜನರು ಸ್ನಾನಮಾಡಿ ಮಂದಿರಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯತ್ತ ಮುಖ ಮಾಡಿದರು.
ಒಂದು ತಿಂಗಳಿಂದ ನಡೆಯುತ್ತಿರುವ ರಂಜಾನ್ ವೃತಾಚರಣೆ ಪೂರ್ಣಗೊಳ್ಳುವ ಸನೀಹಕ್ಕೆ ಬಂದಿದ್ದು, ಸೋಮವಾರ ಇಲ್ಲವೇ ಮಂಗಳವಾರ ರಂಜಾನ್ ಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಮರು ಶಾಹ ಬಜಾರ, ದುರ್ಗದಬೈಲ್ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಬಟ್ಟೆ, ಖಾದ್ಯಗಳಿಗೆ ಬೇಕಾದ ಸಾಮಗ್ರಿ ಖರೀದಿಸಿದರು.