ಗೋಪಾಲಸ್ವಾಮಿ ಬೆಟ್ಟದಲ್ಲಿ ಶೂಟಿಂಗ್

ಗುಂಡ್ಲುಪೇಟೆ ಪಟ್ಟಣದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಮುಖಂಡರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಡಾ.ಗುರುಪ್ರಸಾದ್, ಮಹದೇವಪ್ಪ, ಸಂಪತ್ತು, ಜಯಕುಮಾರ್ ಇತರರು ಇದ್ದರು.
ಗುಂಡ್ಲುಪೇಟೆ ಪಟ್ಟಣದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಮುಖಂಡರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಡಾ.ಗುರುಪ್ರಸಾದ್, ಮಹದೇವಪ್ಪ, ಸಂಪತ್ತು, ಜಯಕುಮಾರ್ ಇತರರು ಇದ್ದರು.
Published on

ಗುಂಡ್ಲುಪೇಟೆ: ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಂ ಚಿತ್ರದ ಚಿತ್ರೀಕರಣಕ್ಕೆ ಅನಧಿಕೃತವಾಗಿ ಅವಕಾಶ ನೀಡಿದ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಸಂಘಟನೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಕಚೇರಿ ಎದುರು ಸೇರಿದ ಕಾರ್ಯಕರ್ತರು ಬಂಡೀಪುರದ ಅರಣ್ಯಾಧಿಕಾರಿಗಳು ಚಿತ್ರೀಕರಣ ತಂಡದಿಂದ ಲಂಚ ಸ್ವೀಕರಿಸಿ ನಕಲಿ ದಾಖಲೆ ಸೃಷ್ಟಿಸಿ ಮಲೆಯಾಳಂ ಚಿತ್ರದ ಶೂಟಿಂಗ್‌ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ರೈತ ಸಂಘಟನೆ ಪ್ರತಿಭಟನೆ ಕೈಗೊಂಡಾಗ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಪ್ರಭಾಕರನ್ ನಕಲಿ ಪತ್ರ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಸಂಬಂಧಿಸಿದ ದಾಖಲೆಗಳನ್ನು ಒಂದು ವಾರದೊಳಗಾಗಿ ಕೊಡುವ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಮಾತು ತಪ್ಪಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿದ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದಲ್ಲಿ ಅನುಮತಿ ಇಲ್ಲದೆ ಚಿತ್ರೀಕರಣ ನಡೆಸಿದ್ದಲ್ಲದೆ ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಹಾಗೂ ಶೂಗಳನ್ನು ಹಾಕಿಕೊಂಡು ಓಡಾಡಿದ್ದಾರೆ. ಸಿಗರೇಟು ಬಿಡಿ ಸೇದಿದ ಚಿತ್ರೀಕರಣ ತಂಡ ಅಲ್ಲಿನ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದ ಬಗ್ಗೆ ದೂರು ನೀಡಿದ್ದರೂ ತಹಸೀಲ್ದಾರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳನ್ನು ಸರ್ಕಾರ ಕೂಡಲೇ ಅಮಾನತುಗೊಳಿಸಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಗೋಪಾಲಸ್ವಾಮಿ ಬೆಟ್ಟದಲ್ಲಿ ಅರಣ್ಯ ಇಲಾಖೆಯವರು ಹಾಕಿರುವ ಗೇಟುಗಳನ್ನು ತೆರವುಗೊಳಿಸಿ, ಮುಜರಾಯಿ ಇಲಾಖೆಯ ದೇವಸ್ಥಾನಕ್ಕೆ ಹೋಗಲು ಅಲ್ಲಿನ ಭಕ್ತರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಮಡ್ರಳ್ಳಿ ಮಾದೇವಪ್ಪ, ಪ್ರಧಾನ ಕಾರ್ಯದರ್ಶಿ ಕುಂದಕೆರೆ ಸಂಪತ್ತು, ತಾಲೂಕು ಅಧ್ಯಕ್ಷ ಕಂದೇಗಾಲ ಹೊಸೂರು ಮಹೇಶ್, ಉಪಾಧ್ಯಕ್ಷ ಆಲಳ್ಳಿ ಮಹೇಶ್, ಹಸಿರು ಸೇನೆ ಅಧ್ಯಕ್ಷ ಹಿರೀಕಾಟಿ ಚಿಕ್ಕಣ್ಣ, ಕಾರ್ಯದರ್ಶಿ ಬೆಟ್ಟಳ್ಳಿ ಗುರು, ನಾಗೇಂದ್ರ, ನಂದೀಶ್, ಕೊಡಹಳ್ಳಿ ರಘು, ಮಲ್ಲ, ಬೆಳ್ಳಶೆಟ್ಟಿ, ಜಿಲ್ಲಾ ಕಾರ್ಯಧ್ಯಕ್ಷ ಬೆಟ್ಟದಮಾದಳ್ಳಿ ಲೋಕೇಶ, ಸಂಚಾಲಕ ಮೂರ್ತಿಬುದ್ಧಿ, ಶಿವಪಾದ, ಕಬ್ಬಳ್ಳಿ ಪ್ರಕಾಶ, ಕಂದೇಗಾಲ ವೃಷಭೇಂದ್ರ ಹಕ್ಕಲಪುರ ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net