

ಚಿಕ್ಕಬಳ್ಳಾಪುರ: ಮಂಚೇನಹಳ್ಳಿಯಲ್ಲಿ ಗಣಿಗಾರಿಕೆ ವಿಚಾರವಾಗಿ ಶೂಟ್ ಔಟ್ ಹಾಗೂ ಗುಂಪು ಗಲಾಟೆಯ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು, ಕ್ವಾರಿಗಾಗಿ ರಸ್ತೆ ನಿರ್ಮಿಸಲು ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.
ಗಣಿಗಾರಿಕೆಯಿಂದ ಪರಿಸರ ನಾಶವಾಗುವ ದೂರು ಹಾಗೂ ಸಂಬಂಧಪಟ್ಟವರು ನಿಯಮ ಉಲ್ಲಂಘಿಸಿದ ಅಂಶಗಳನ್ನೊಳಗೊಂಡಂತೆ ಉಪ ವಿಭಾಗಾಧಿಕಾರಿಗಳು, ಮಂಚೇನಹಳ್ಳಿ ತಹಸೀಲ್ದಾರ್ ನೀಡಿದ ವರದಿಯನ್ನು ಪರಿಗಣಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರ ನಿಯಮ 25 ರಂತೆ ರಸ್ತೆ ನಿರ್ಮಾಣವನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಏ.24 ರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
*ರೈತನ ಸಹಿ ನಕಲು?
ಕಲ್ಲು ಕ್ವಾರಿಗಾಗಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಭಾವಿಗಳು ರೈತನ ಸಹಿಯನ್ನು ನಕಲು ಮಾಡಿರುವ ಆರೋಪ ಕೇಳಿ ಬಂದಿದೆ.
ಮಂಚೇನಹಳ್ಳಿಯ ಸ.ನಂ.188 ರ ವಿಸ್ತೀರ್ಣ 250 ಎಕರೆ ಜಮೀನಿನಲ್ಲಿ ಹುಲ್ಲುಗಾವಲಿಗೆ ಅಂಟಿಕೊಂಡಿರುವ ಬೆಟ್ಟದ ಪ್ರದೇಶದಲ್ಲಿ ದನ ಕರುಗಳು ಹುಲ್ಲು ಮೇಯಲು, ಸ್ಥಳಿಯ ಚೆಕ್ ಡ್ಯಾಂ, ಕೊರಕಲು ಗುಣಿಗಳಲ್ಲಿ ಶೇಖರಣೆಯಾಗಿರುವ ನೀರನ್ನು ಸೇವಿಸಲು ಅನುಕೂಲವಾಗಿದ್ದು ಇದರ ಮಧ್ಯೆ ಕೆಲ ಗಣಿಕುಳಗಳು ಸಹಿಯನ್ನು ನಕಲು ಮಾಡಿ, ಕ್ವಾರಿಗೆ ರಸ್ತೆ ನಿರ್ಮಿಸಿಕೊಳ್ಳಲು ಅಕ್ರಮವೆಸಗಿದ್ದಾರೆ ಎಂದು ಬಂಡಿರಾಮನಹಳ್ಳಿಯ ಗೋಪಿನಾಥ ತಾಲೂಕು ಕಚೇರಿಗೆ ದೂರು ಸಲ್ಲಿಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಸಲ್ಲಿಕೆಯ ಪತ್ರದಲ್ಲಿನ ಸಹಿಯು ತನ್ನದಲ್ಲ ಎಂದೇಳಿದ್ದಾರೆ.
*ಈಗ ಪರಿಸರಕ್ಕೆ ಮಾರಕ
ಹಲವು ತಿಂಗಳಿಂದಲೂ ಮಂಚೇನಹಳ್ಳಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡುತ್ತಿರುವುದನ್ನು ವಿರೋಧಿಸಿ ಸ್ಥಳಿಯರು ಪ್ರತಿಭಟಿಸುತ್ತಿದ್ದಾರೆ. ಆದರೂ ಕಿವಿಗೊಡುವ ಕೆಲಸವಾಗಿರಲಿಲ್ಲ. ಆದರೆ, ಗಣಿ ಮಾಲೀಕ ಸಂಬಂಧಿಯಿಂದ ಶೂಟ್ ಔಟ್ ನಡೆದು, ದೊಡ್ಡ ಗಲಾಟೆ ಉಂಟಾಗುತ್ತಿದ್ದಂತೆ ರೈತನು ಮನವಿಯಲ್ಲಿ ಪರಿಸರಕ್ಕೆ ಮಾರಕ ಎಂಬ ಅಂಶ ಪ್ರಸ್ತಾಪಿಸಿರುವುದನ್ನು ಜಿಲ್ಲಾಡಳಿತವು ಪುರಸ್ಕರಿಸಿದೆ. ರಸ್ತೆ ನಿರ್ಮಾಣಕ್ಕೆ ಅನುಮತಿ ರದ್ದುಪಡಿಸುವ ಆದೇಶದ ಪತ್ರದಲ್ಲಿ ಪರಿಗಣನೆಯ ಮಾತನ್ನು ಹೇಳಲಾಗಿದೆ. ಇದೇ ಕೆಲಸವನ್ನು ಮೊದಲೇ ಏಕೆ ಮಾಡಲಿಲ್ಲ? ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.