ಮಂಚೇನಹಳ್ಳಿಯಲ್ಲಿ ಶೂಟ್ ಔಟ್ ಪ್ರಕರಣ, ಒಂದು ತಿಂಗಳಲ್ಲಿ ಕ್ವಾರಿ ಪರವಾನಗಿ ರದ್ದುಗೊಳಿಸುವ ಭರವಸೆ

IMG-20250423-WA0189.jpg
Published on

ಚಿಕ್ಕಬಳ್ಳಾಪುರ: ಮಂಚೇನಹಳ್ಳಿಯ ಭಾಗದಲ್ಲಿ ಗಣಿಗಾರಿಕೆಗೆ ನೀಡಿರುವ ಪರವಾನಗಿಯನ್ನು ಒಂದು ತಿಂಗಳಲ್ಲಿ ರದ್ದುಪಡಿಸಲಾಗುತ್ತದೆ ಎಂದು ಶಾಸಕ ಪ್ರದಿಪ್ ಈಶ್ವರ್ ಹೇಳಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಚೇನಹಳ್ಳಿಯಲ್ಲಿ ಗಣಿಗಾರಿಕೆ ಹಾಗೂ ರಸ್ತೆ ನಿರ್ಮಾಣ ವಿಚಾರವಾಗಿ ನಡೆದ ಶೂಟ್ ಔಟ್ ಪ್ರಕರಣದಲ್ಲಿ ಬಂಧಿತ ಸಕಲೇಶ್ ಸೇರಿದಂತೆ ನಾಲ್ವರು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ. ಗಣಿಗಾರಿಕೆಯ ಪರವಾನಗಿಯು ಸಂಸದ ಡಾ ಕೆ.ಸುಧಾಕರ್ ಶಾಸಕರಾಗಿದ್ದ ಅವಧಿಯಲ್ಲಿ ಸಿಕ್ಕಿದೆ. ಆದರೂ ಸುಳ್ಳು ಮಾತನ್ನು ಹೇಳಿ ದಿಕ್ಕು ತಪ್ಪಿಸುತ್ತಿರುವವರ ಬಗ್ಗೆ ಜನರು ಸರಿಯಾಗಿ ಗ್ರಹಿಸಬೇಕು ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅಧಿಕಾರದಲ್ಲಿದ್ದಾಗ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಗಣಿಗಾರಿಕೆ ಪರವಾನಗಿ ಪಡೆದಿದ್ದಾರೆ. ಆಗ ಶಾಸಕರಾಗಿ ಕೆ.ಸುಧಾಕರ್ ಕಾರ್ಯ ನಿರ್ವಹಿಸುತ್ತಿದ್ದರು. ಶೂಟ್ ಔಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಸಕಲೇಶ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದರು ಎಂದರು.
ಮೊದಲಿನಿಂದಲೂ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆಯನ್ನು ವಿರೋಧಿಸಿಕೊಂಡು ಬರುತ್ತಿದ್ದು ಮಂಚೇನಹಳ್ಳಿಯಲ್ಲಿ ಹೊಸದಾಗಿ ಕ್ವಾರಿ ನಿರ್ವಹಿಸಲು ಬಿಡಲ್ಲ. ರಸ್ತೆ ನಿರ್ಮಾಣಕ್ಕೆ ವಿವಾದ ಉದ್ಭವವಾಗುತ್ತಿದ್ದಂತೆ ಒಂದೇ ದಿನದಲ್ಲಿ ಕೆಲಸದ ಮಂಜೂರಾತಿ ಆದೇಶವನ್ನು ರದ್ದುಪಡಿಸಲಾಗಿದೆ. ಇದು ನಮ್ಮ ತಾಕತ್ತು ಎಂದರು.
ಸಂಸದ ಡಾ ಕೆ.ಸುಧಾಕರ್ ಸುಳ್ಳು ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅವರು ನನ್ನ ಲೆವಲ್ಗೆ ಇಲ್ಲ. ಅವರಿಗೆ ನನ್ನ ಕಾರ್ಯಕರ್ತರೇ ಉತ್ತರ ನೀಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net