ಸಿಜೆಐ ಮೇಲೆ ಬೂಟು ಎಸೆದ ಪ್ರಕರಣ, ಸಂವಿಧಾನ ವಿರೋಧಿ ಕೃತ್ಯಕ್ಕೆ ತೀವ್ರ ಖಂಡನೆ, ವಿಜಯಪುರ ಬಂದ್‌ಗೆ ಲಿಂಗಾಯತ-ಅಹಿಂದ ಮುಖಂಡರ ಬೆಂಬಲ

LINGAYATA-AHINDA PRESS MEET
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಲಿಂಗಾಯತ ಮಹಾಸಭಾ ಹಾಗೂ ಅಹಿಂದ ಒಕ್ಕೂಟದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ, ಡಾ.ಜೆ.ಎಸ್. ಪಾಟೀಲ, ಡಾ.ರವಿ ಬಿರಾದಾರ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ದೇಶದ ಸವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಬೂಟು ಎಸೆದ ಪ್ರಕರಣವನ್ನು ಖಂಡಿಸುವ ನಿಟ್ಟಿನಲ್ಲಿ ಅ. 16 ರಂದು ಆಚರಿಸಲಾಗುತ್ತಿರುವ ವಿಜಯಪುರ ಬಂದ್ ಆಚರಣೆಯಲ್ಲಿ ಸಂವಿಧಾನದ ಮೇಲೆ ನಂಬಿಕೆ ಇರುವವರು, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ವಿಶ್ವಾಸ ಉಳ್ಳುವರು, ದೇಶಾಭಿಮಾನಿಗಳು ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳುವರೆಂದು ಲಿಂಗಾಯತ ಮಹಾಸಭಾ ಹಾಗೂ ಅಹಿಂದ ಒಕ್ಕೂಟದ ಮುಖಂಡರು ತಿಳಿಸಿದರು.

ಆರ್‌ಎಸ್‌ಎಸ್ ಮೂಲದಿಂದ ಬಂದ ಕಿಶೋರ್ ರಾಕೇಶ ಎಂಬಾತ ಸುಪ್ರೀಂ ಕೋರ್ಟ್‌ನ ಪೀಠದ ಮೇಲೆ ಬೂಟು ಎಸೆದಿದ್ದಾನೆ. ಆ ಮೂಲಕ ಈ ದೇಶದ ಸಂವಿಧಾನದ ಮೇಲೆ ದಾಳಿ ನಡೆಸಿದ್ದಾನೆ. ದೇಶದ್ರೋಹಿ ಕೃತ್ಯ ಎಸಗಿರುವ ಕಿಶೋರ್ ರಾಕೇಶನಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಿತ್ತು. ಆದರೆ, ಈವರೆಗೂ ಆರ್‌ಎಸ್‌ಎಸ್ ಬೆಂಬಲಿತ ಕೇಂದ್ರ ಬಿಜೆಪಿ ಸರ್ಕಾರದ ಅಂಥದ್ದೊಂದು ಕ್ರಮ ಕೈಗೊಳ್ಳದಿರುವುದು ದೇಶದ್ರೋಹಕ್ಕೆ ಸಮ. ಹೀಗಾಗಿ ಸಂವಿಧಾನ ಪ್ರೇಮಿಗಳು, ದೇಶಭಕ್ತರು ನೀಡಿದ ಅ. 16 ಬಂದ್ ಆಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ದೇಶಾಭಿಮಾನ ಮೆರೆಯಬೇಕೆಂದು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಈ ದೇಶದ ಸಂವಿಧಾನವನ್ನು ಓರ್ವ ದಲಿತ ವ್ಯಕ್ತಿ ಬರೆದನೆಂಬುದನ್ನು ಸನಾತನವಾದಿಗಳಿಗೆ ಸಹಿಸಲಾಗುತ್ತಿಲ್ಲ. ಸ್ವಾತಂತ್ರೃ ಪೂರ್ವದಲ್ಲೇ ದಲಿತರಿಗೆ ಸಮಾನತೆ ಮತ್ತು ಮತದಾನದ ಹಕ್ಕು ಕೊಡುವುದೇ ಆಗಿದ್ದರೆ ಅಂಥ ಸ್ವಾತಂತ್ರೃವೇ ತಮಗೆ ಬೇಡವೆಂದಿದ್ದರು ಈ ಸನಾತನವಾದಿಗಳು. ಇದೀಗ ಓರ್ವ ದಲಿತ ವ್ಯಕ್ತಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುವುದನ್ನು ಅರಗಿಸಿಕೊಳ್ಳಲಾಗದೇ ಬೂಟು ಎಸೆದಿದ್ದಾರೆ. ಇದು ಕೇವಲ ಬಿ.ಆರ್. ಗವಾಯಿ ಅವರ ಮೇಲೆ ಎಸೆದದ್ದಲ್ಲ; ಸಂವಿಧಾನದ ಮೇಲೆ ಎಸೆದದ್ದಾಗಿದೆ ಎಂದು ಹರಿಹಾಯ್ದರು.

ಸಂಘ ಪರಿವಾರದವರಿಗೆ ದಲಿತರೇ ಟಾರ್ಗೆಟ್. ಸಂವಿಧಾನವೇ ಟಾರ್ಗೆಟ್ ಎಂಬುದಕ್ಕೆ ಕಿಶೋರ್ ರಾಕೇಶ ನ್ಯಾಯಮೂರ್ತಿಗಳ ಪೀಠದತ್ತ ಬೂಟು ಎಸೆದ ಕೃತ್ಯವೇ ಸಾಕ್ಷಿ. ಈ ಸಂಘ ಪರಿವಾರದವರು ಮುಸ್ಲಿಂರಿಗೇನೂ ಮಾಡಲಾಗಲ್ಲ. ಮುಸ್ಲಿಂರು ಇಂಥ ಆರ್‌ಎಸ್‌ಎಸ್‌ನ್ನು ಬಹಳಷ್ಟು ನೋಡಿದ್ದಾರೆ. ಹೀಗಾಗಿ ಅವರ ಗುರಿ ಕೇವಲ ದಲಿತರು ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಕಚೇರಿ, ಸಂಸ್ಥೆಗಳು ಹಾಗೂ ಶಾಲೆ-ಕಾಲೇಜ್‌ಗಳ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆ ಬ್ಯಾನ್ ಮಾಡುವಂತೆ ಸಿಎಂಗೆ ಪತ್ರ ಬರೆದ ಬೆನ್ನಲ್ಲೇ ಸಂಘ ಪರಿವಾರದವರು ತಾಕತ್ತಿದ್ದರೆ ಬ್ಯಾನ್ ಮಾಡಿ ಎನ್ನುತ್ತಿದದಾರೆ. ಆದರೆ, ಈ ಹಿಂದೆ ಕಾಂಗ್ರೆಸ್ ಸಂಘ ಪರಿವಾರವನ್ನು ಬ್ಯಾನ್ ಮಾಡಿತ್ತೆಂಬುದನ್ನು ಮರೆಯಬಾರದು ಎಂದರು.

ಲಿಂಗಾಯತ ನಾಯಕ, ಚಿಂತಕ ಮತ್ತು ಸಾಹಿತಿ ಡಾ.ಜೆ.ಎಸ್. ಪಾಟೀಲ ಮಾತನಾಡಿ, ಈ ದೇಶದಲ್ಲಿ ಸಮಾನತೆ, ಮೀಸಲಾತಿಯನ್ನು ವಿರೋಧಿಸಿಕೊಂಡೇ ಬಂದಿರುವ ಸಂಘ ಪರಿವಾರದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿ ಜಾರಿಗೊಳಿಸಲು ಹೊರಟಾಗಲೂ ವಿರೋಧಿಸಿದ್ದರು. ವಿಶ್ವೇಶ್ವರಯ್ಯ ಎಂಬ ದಿವಾನರು ರಾಜೀನಾಮೆ ಕೊಡುವುದಾಗಿ ಹೇಳಿದ್ದರು. ಇದೀಗ ಮೂರ್ನಾಲ್ಕು ತಿಂಗಳ ಹಿಂದೆ ಶಂಕರಾಚಾರ್ಯರ ಜಯಂತಿ ಸಂದರ್ಭ ನಿವೃತ್ತ ನ್ಯಾಯಾಧೀಶನೊಬ್ಬ ಮಾತನಾಡುತ್ತಾ, ದೇಶದಲ್ಲಿ ಸಮಾನತೆ ತಂದವರು ಅಂಬೇಡ್ಕರ್ ಅಲ್ಲ ಶಂಕರಾಚಾರ್ಯ ಎನ್ನುವ ಮೂಲಕ ತಮ್ಮ ಮನಃಸ್ಥಿತಿ ಪ್ರದರ್ಶಿಸಿದ್ದರು. ಇದೀಗ ಬೂಟು ಎಸೆದಿರುವ ಮನಃಸ್ಥಿತಿಯೂ ಅಂಥದ್ದೆ. ಹೀಗಾಗಿ ಇನ್ನಾದರೂ ಇವರ ಹುನ್ನಾರ ಅರಿಯದೇ ಹೋದರೆ ಗಂಡಾಂತರ ತಪ್ಪಿದ್ದಲ್ಲ ಎಂದರು.

ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸನಗೌಡ ಹರನಾಳ ಮಾತನಾಡಿ, ಪ್ರಜಾಪ್ರಭುತ್ವದ ಭಾಗವಾಗಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಬೂಟು ಎಸೆದವನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಡಾ.ರವಿ ಬಿರಾದಾರ ಬಿರಾದಾರ ಮಾತನಾಡಿ, ಕಳೆದ 11-12 ವರ್ಷಗಳಿಂದ ಮೂಲ ನಿವಾಸಿಗಳ ಮೇಲೆ ಸನಾತನವಾದಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಆರ್‌ಎಸ್‌ಎಸ್ ಕಚೇರಿ ಮೇಲೆ ಎಷ್ಟೋ ವರ್ಷಗಳ ತನಕ ತಿರಂಗಾ ಧ್ವಜವನ್ನೇ ಹಾರಿಸಿರಲಿಲ್ಲ. ಕೆಲವು ದೇಶಭಕ್ತರು ತಿರಂಗಾ ಹಾರಿಸಿದರೆ ಅವರ ಮೇಲೆ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದರು. ಹೀಗಾಗಿ ಅವರಿಗೆ ತಿರಂಗಾ, ಜನಗಣಮನ, ಸಂವಿಧಾನ ಬೇಕಿಲ್ಲ ಎಂದರು.

ಮುಖಂಡ ಡಾ. ಪ್ರಭು ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net