

ಮೈಸೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ವಕೀಲನೊಬ್ಬ ಶೂ ಎಸೆದ ಘಟನೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಪುರಭವನ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ಮಂಗಳವಾರ ಪ್ರತಿಭಟನೆ ನಡೆಯಿತು.
ಶ್ರೀ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಈ ದೇಶ ಸಂವಿಧಾನದ ಅಡಿಯಲ್ಲಿ ಇದೆಯೇ ಹೊರತು ಯಾವುದೇ ಪಕ್ಷದ ಅಡಿಯಲ್ಲಿ ಇಲ್ಲ. ದೇಶ ದೊಡ್ಡದೇ ಹೊರತು ಧರ್ಮ ದೊಡ್ಡದಲ್ಲ. ಈ ಕೃತ್ಯ ದಲಿತರ ವಿರುದ್ಧ ನಡೆದಿರುವುದಲ್ಲ. ಈ ದೇಶದ ಸಂವಿಧಾನ ಅಖಂಡತೆಯ ಮೇಲೆ ನಡೆದಿರುವುದು. ಹಾಗಾಗಿ ಎಲ್ಲರು ಒಟ್ಟಾಗಿ ಘಟನೆಯನ್ನು ಖಂಡಿಸಬೇಕು ಎಂದು ಹೇಳಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವುದು ಇಡೀ ದೇಶಕ್ಕೆ ಮಾಡಿದ ಅಪಮಾನ. ಈ ದೇಶದಲ್ಲಿ ಸಂವಿಧಾನವೇ ಸುಪ್ರೀಂ ಹೊರತು ಸನಾತನವಾದವಲ್ಲ. ಸನಾತನವಾದ ಮತ್ತು ಅಂಬೇಡ್ಕರ್ ವಾದಿಗಳ ನಡುವೆ ಸಂಘರ್ಷ ನಡೆಯಬೇಕು ಎಂಬ ಉದ್ದೇಶ ನಿಮ್ಮದಾಗಿದ್ದರೆ ನಾವು ಸಿದ್ಧರಾಗಿಯೇ ಇದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಅಹಿಂದ ಜವರಪ್ಪ, ಸಿದ್ದಸ್ವಾಮಿ, ಸಿ.ಹರಕುಮಾರ್, ಎನ್.ಭಾಸ್ಕರ್, ಕಾಂತರಾಜು, ಮರಿದೇವಯ್ಯ, ಪಲ್ಲವಿ ಬೇಗಂ, ಜೋಗಿ ಮಹೇಶ್, ಅಶೋಕಪುರಂ ರವಿ, ಉಮೇಶ್, ಪುಟ್ಟಸಿದ್ದೇಗೌಡ ಹಾಗೂ ಇತರರು ಪಾಲ್ಗೊಂಡಿದ್ದರು.