ಕೃತಕ ಬಣ್ಣ ಬಳಸುತ್ತಿದ್ದವರಿಗೆ ಶಾಕ್​

17, srinivaspur photo-5
Published on

ಶ್ರೀನಿವಾಸಪುರ: ಜನರ ಆರೋಗ್ಯ ಮುಖ್ಯ ಎನ್ನುವ ದೃಷ್ಟಿಯಿಂದ ಇಲಾಖೆಯು ಜಾಗೃತಿ ಮೂಡಿಸುವ ಸಲುವಾಗಿ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಅಂಕಿತ, ಆಹಾರ ಸುರಕ್ಷಿತ ಮತ್ತು ಔಷಧ ಆಡಳಿತ ಅಧಿಕಾರಿ ಡಾ.ರಾಕೇಶ್​ ತಿಳಿಸಿದರು.

ಪಟ್ಟಣದ ಬೇಕರಿಗಳು, ಹೋಟೆಲ್​ಗಳು, ದಿನಸಿ ಅಂಗಡಿಗಳ ಮೇಲೆ ಆಹಾರ ಸುರಕ್ಷಿತ ಮತ್ತು ನಿಯಂತ್ರಣ ಇಲಾಖೆ ಹಾಗೂ ಪುರಸಭೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಂಟಿ ಕಾರ್ಯಚರಣೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ 9 ಕಡೆ ಕಾರ್ಯಾಚರಣೆ ನಡೆಸಲಾಗಿದ್ದು, ಸ್ವಚ್ಛತೆ ನೈರ್ಮಲ್ಯ ಇಲ್ಲ, ಅಲ್ಲದೆ ಶುದ್ಧ ಕುಡಿಯುವ ನೀರು ಇಲ್ಲದೆ ಇದ್ದಿದ್ದು, ಕಂಡಬಂದ ಹಿನ್ನೆಲೆಯಲ್ಲಿ ಕೆಲ ಅಂಗಡಿ ಮಾಲೀಕರಿಗೆ ನೋಟಿಸ್​ ನೀಡಿ ದಂಡ ವಿಧಿಸಲಾಗಿದೆ. ಪಟ್ಟಣದಲ್ಲಿನ ಬೇಕರಿ, ಹೋಟೆಲ್​ಗಳಲ್ಲಿ ಬಣ್ಣ ಬಳಸಿರುವುದು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಕೆಲವೆಡೆ ಲಿಮ್ರರಾ ಫ್ರೆಷ್​, ಎಂಪಿ ಕಂಪನಿಗಳ ಮಿನಿರಲ್​ ಬಾಟಲ್​ಗಳು ಕುಡಿಯಲು ಯೋಗ್ಯವಿಲ್ಲದಿರುವ ಬಗ್ಗೆ ದೂರು ಬಂದಿದ್ದು, ಎರಡು ಕಂಪನಿಗಳ ಬಾಟಲ್​ಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ನೋಟಿಸ್​ ನೀಡಲಾಗಿದೆ. ಕೆಲ ಹೋಟೆಲ್​ಗಳಲ್ಲಿ ಸುರಕ್ಷಿತವಲ್ಲದ ಸಿಲ್ವರ್​ ಪೇಪರ್​ಗಳಲ್ಲಿ ಆಹಾರ ಸರಬರಾಜು ಮಾಡುತ್ತಿದ್ದು, ವಶಕ್ಕೆ ಪಡೆಯಲಾಗಿದೆ ಎಂದರು.

ಪಟ್ಟಣದಲ್ಲಿನ ಕೆಲ ಬೇಕರಿಗಳಲ್ಲಿ ಬಣ್ಣ ಬಳಸಿರುವುದು ಸಾಬೀತಾಗಿ ನೋಟಿಸ್​ ನೀಡಿ 2 ಸಾವಿರ ದಂಡ ವಿಧಿಸಲಾಗಿದೆ. ಕೆಲ ಚಾಟ್ಸ್​ ಅಂಗಡಿಗಳು ಪರವಾನಗಿ ಪಡೆಯದೆ ನಡೆಸುತ್ತಿದ್ದು, ನೋಟಿಸ್​ ನೀಡಿ ಒಂದು ಸಾವಿರ ದಂಡ ವಿಧಿಸಲಾಯಿತು. ಅಲ್ಲದೆ ಗೋಬಿಗೆ ಬಣ್ಣ ಬಳಸಿದ ಅನುಮಾನದ ಮೇಲೆ ಗೋಬಿ ಲ್ಯಾಬ್​ ಟೆಸ್ಟ್​ಗೆ ಕಳುಹಿಸಲಾಗಿದೆ. ಕೆಲ ಕಬಾಬ್​ ಅಂಗಡಿಗಳಲ್ಲಿ ಸಾಸ್​ ಹಾಗೂ ಇತರೆ ಆಹಾರ ಪದಾರ್ಥಗಳಲ್ಲಿ ಬಣ್ಣ ಬಳಸಿರುವುದು ಸಾಭೀತಾಗಿ ದಂಡ ವಿಧಿಸಲಾಗಿದೆ ಎಂದರು.

ಚಿಂತಾಮಣಿ ರಸ್ತೆಯ ಅನ್ಸಾರಿ ದಿನಸಿ ಅಂಗಡಿಯ ಪರವಾನಗಿ ಹೊಂದಿಲ್ಲ. ಈ ಅಂಗಡಿಯಲ್ಲಿ ಬಕೀಟ್​ಗಟ್ಟಲ್ಲೇ ಟೇಸ್ಟಿಂಗ್​ ಪೌಡರ್​, ಬಣ್ಣ ಮಿಶ್ರಿತ ಬೋಟಿಗಳು, ಪ್ಲಾಸ್ಟಿಕ್​ ಚೀಲಗಳು ಇದ್ದವು ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಪುರಸಭೆ ಹಾಗೂ ನಮ್ಮ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದಾಗ ಸರ್ಕಾರಿ ಕೆಲಸಕ್ಕೆ ಅಂಗಡಿ ಮಾಲೀಕ ಅಡ್ಡಿಪಡಿಸಿದರು. ಅಲ್ಲದೆ ನಮ್ಮ ಮೇಲೆ ದಾಳಿ ನಡೆಸಲು ಬಂದ ಹಿನ್ನೆಲೆಯಲ್ಲಿ ಇಲಾಖೆ ಹಾಗೂ ಪುರಸಭೆಯಿಂದ ಪೊಲೀಸ್​ ಠಾಣೆಗೆ ದೂರು ಸಲ್ಲಿಸಲಾಗಿದೆ. ಠಾಣೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದರು.

ಪಟ್ಟಣದಲ್ಲಿನ 7 ಕಡೆ ಜಂಟಿ ಕಾರ್ಯಾಚರಣೆ ನಡೆಸಿ, ಒಟ್ಟಾರೆ 9,500 ದಂಡ ರೂ. ವಿಧಿಸಲಾಯಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net