

ಮಂಜುನಾಥ ಅಂಗಡಿ ಧಾರವಾಡ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿದ್ದ ಜಿ.ಪಂ., ಇಡೀ ಪ್ರಕ್ರಿಯೆಯನ್ನೇ ರದ್ದುಪಡಿಸಿದೆ. ಹೊರಗುತ್ತಿಗೆ ಅಡಿ 14 ಹುದ್ದೆಗಳ ನೇಮಕಾತಿಗೆ ಮರು ಅಧಿಸೂಚನೆ ಹೊರಡಿಸಿರುವುದು ಕೆಲವರಿಗೆ ಸಿಹಿ, ಹಲವರಿಗೆ ಕಹಿಯಾಗಿ ಪರಿಣಮಿಸಿದೆ.
ಧಾರವಾಡ ಜಿ.ಪಂ. ಕೇಂದ್ರ ಕಚೇರಿ ಮತ್ತು ಅಳ್ನಾವರ, ಅಣ್ಣಿಗೇರಿ ತಾಪಂ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ 2021ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅ. 21ರಂದು ನಿಯಮಾನುಸಾರ 14 ಅಭ್ಯರ್ಥಿಗಳನ್ನು ನೇಮಕ ಮಾಡಿದ್ದ ಜಿ.ಪಂ. ಸಿಇಒ ಡಾ. ಬಿ. ಸುಶೀಲಾ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರ ಅನುಮೋದನೆಗೆ ಕಳುಹಿಸಿದ್ದರು. ಆಯ್ಕೆಯಾದವರ ಪಟ್ಟಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದರಿಂದ ಅಭ್ಯರ್ಥಿಗಳು ಖುಷಿ ಪಟ್ಟಿದ್ದರು. ಆದರೆ, ಅದೇ ಹುದ್ದೆಗಳಿಗೆ ಈಗ ಮರು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿರುವುದು, ಆಯ್ಕೆಯಾದವರಿಗೆ ಅನ್ಯಾಯ ಮಾಡಿದ ಆರೋಪ ಕೇಳಿಬಂದಿದೆ.
ಹುದ್ದೆ ಮತ್ತು ಆಯ್ಕೆಯಾದವರು
ಸಹಾಯಕ ಜಿಲ್ಲಾ ಸಮನ್ವಯಕರು, ಜಿಲ್ಲಾ ಐಇಸಿ ಸಂಯೋಜಕರು, ತಾಲೂಕು ಎಂಐಎಸ್ ಸಂಯೋಜಕರು, ತಾಲೂಕು ಐಇಸಿ ಸಂಯೋಜಕರು, ತಾಲೂಕು ಸಂಯೋಜಕರು, ಡೇಟಾ ಎಂಟ್ರಿ ಆಪರೇಟರ್ಗಳು, ತಾಂತ್ರಿಕ ಸಹಾಯಕರು (ಕೃಷಿ), ತಾಂತ್ರಿಕ ಸಹಾಯಕರು (ಅರಣ್ಯ), ತಾಲೂಕು ತಾಂತ್ರಿಕ ಸಹಾಯಕರು (ಸಿವಿಲ್) ಸೇರಿ 14 ಹುದ್ದೆಗಳಿಗೆ ಹೊರಗುತ್ತಿಗೆ ಅಡಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಚೇತನ್ ಎಸ್. ಗುಡಿ, ನಿತೀಶ ಶ್ರೀಕಾಂತ ಡಂಬಳ, ರಶ್ಮಿ ಎಂ. ಹಿರೇಮಠ, ಸೋಮರಾಜ, ಮಲ್ಲಿಕಾರ್ಜುನಗೌಡ ಬಾಳನಗೌಡ್ರ, ನಟರಾಜ ಶೃಂಗೇರಿ, ಅನ್ನಪೂರ್ಣ ಬಟಕುರ್ಕಿ, ಬಸವರಾಜ ಶಿರೂರ, ಪ್ರದೀಪ ಪಿ.ಎಂ., ಬಸವರಾಜ ಲಕ್ಕುಂಡಿ, ಗಿರಿಗೌಡ ಪಾಟೀಲ, ಪವನ ತಿಕ್ಕಪ್ಪನವರ, ಸುಜಾತಾ ರೆಡೇಕರ, ಸೋಮೇಶ ರುದ್ರಯ್ಯ ಧೂಪದ ಆಯ್ಕೆಯಾಗಿದ್ದರು. ಆದರೆ, ಅಧಿಕಾರಿಗಳ ಎಡವಟ್ಟಿನಿಂದಾಗಿ ಆಯ್ಕೆಯಾದವರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಕೊರಗುವಂತಾಗಿದೆ.
ಆಯ್ಕೆ ಪ್ರಕ್ರಿಯೆ ಗೊಂದಲ ಮೊದಲ ಬಾರಿ ಅಧಿಸೂಚನೆ ಹೊರಡಿಸಿದ್ದ ಸಂದರ್ಭದಲ್ಲಿ ಆಯಾ ಹುದ್ದೆಗೆ ವಿದ್ಯಾರ್ಹತೆಯನ್ನು ನಿರ್ದಿಷ್ಟಪಡಿಸಲಾಗಿತ್ತು. ಆದರೆ, ಕೆಲ ಹುದ್ದೆಗಳಿಗೆ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಕ ಮಾಡಿದ್ದ ಆರೋಪ ಕೇಳಿಬಂದಿತ್ತು. ಅಲ್ಲದೆ, ಸಂದರ್ಶನ ಇಲ್ಲದಿದ್ದರೂ ನಡೆಸಿ ಕಾಟಾಚಾರಕ್ಕೆ ಅಂಕ ನೀಡಿ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದ ಆರೋಪವೂ ಇತ್ತು. ಹೀಗಾಗಿ, ಕೆಲವರು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಮರು ಅಧಿಸೂಚನೆ ಹೊರಡಿಸಲು ಕಾರಣ ಎಂದು ತಿಳಿದುಬಂದಿದೆ.
ಮಾಸಿಕ ಸಂಭಾವನೆ ಎಷ್ಟು?
ಈ ಹುದ್ದೆಗಳಿಗೆ ಪಿಯುಸಿ (ಕಂಪ್ಯೂಟರ್ ಜ್ಞಾನ), ಬಿ.ಎಸ್ಸಿ ಕೃಷಿ- ಅರಣ್ಯ, ಬಿಇ ಸಿವಿಲ್, ಬಿ.ಟೆಕ್, ಬಿಸಿಎ, ಎಂಬಿಎ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಬಿ.ಎಸ್ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. 16,724ದಿಂದ 38,000 ರೂ.ವರೆಗೆ ಮಾಸಿಕ ಸಂಭಾವನೆ ನಿಗದಿಗೊಳಿಸಲಾಗಿದೆ. ಹೀಗಾಗಿ, ರಾಜ್ಯದ ಹಲವು ಜಿಲ್ಲೆಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಸ್ಪರ್ಧೆಯೊಡ್ಡಿದ್ದಾರೆ.