

ಶಿವಮೊಗ್ಗ: ತಮಿಳುನಾಡು ಮೂಲದ ಯುವಕನನ್ನು ಪ್ರೀತಿಸಿ, ಕುಟುಂಬದ ಹಿರಿಯರನ್ನು ಒಪ್ಪಿಸಿ ಮನೆಯಲ್ಲೇ ಭಾನುವಾರ ಸರಳ ವಿವಾಹವಾದ ಶಿವಮೊಗ್ಗದ ನವವಧು ಹಸೆಮಣೆ ಏರಿದ ಕೆಲವೇ ನಿಮಿಷದಲ್ಲಿ ವರನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಿ ಅರ್ಥಶಾಸ್ತ್ರ ಪರೀಕ್ಷೆ ಬರೆದಳು.ಭರ್ಮಪ್ಪನಗರದ ಬಿ.ಸತ್ಯವತಿ ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ. ಭಾನುವಾರ ಆಕೆ ಅರ್ಥಶಾಸ್ತ್ರ ಪರೀಕ್ಷೆ ಬರೆಯಬೇಕಿತ್ತು. ಆದರೆ ಅಂದೇ ಮದುವೆ ಇದ್ದ ಕಾರಣ ಮನೆಯವರು ಯೋಚಿಸುವಂತಾಯಿತು. ಆದರೆ ಪರೀಕ್ಷೆ ಬರೆಯುವ ಬಗ್ಗೆ ಕುಟುಂಬದವರನ್ನು ಒಪ್ಪಿಸಿದ ಸತ್ಯವತಿ ಸ್ನೇಹಿತ ಫ್ರಾನ್ಸಿಸ್ ಜತೆ ಭಾನುವಾರ ಬೆಳಗ್ಗೆ ಸರಳವಾಗಿ ವಿವಾಹ ಮಾಡಿಕೊಂಡಳು. ಹಸೆಮಣೆ ಏರಿದ ಮರುಕ್ಷಣವೇ ನೇರವಾಗಿ ಮದುವೆ ಮಂಟಪದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಿದಳು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಮರುಕ್ಷಣದಲ್ಲೇ ಸತ್ಯವತಿ ಹೂವಿನ ಹಾರ, ಆಭರಣಗಳ ಸಹಿತ ಪತಿಯೊಂದಿಗೆ ಬೈಕ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು. ಇದರಿಂದ ಅಚ್ಚರಿಗೊಳಗಾದ ಸ್ನೇಹಿತೆಯರು ಒಂದು ಕ್ಷಣ ಸಾವರಿಸಿಕೊಂಡು ಸತ್ಯವತಿಗೆ ಶುಭಾಶಯ ಕೋರಿದರು. ಪರೀಕ್ಷೆ ಬರೆಯುವ ಸತ್ಯವತಿಯ ನಿರ್ಧಾರವನ್ನು ಸಹಪಾಠಿಗಳು ಮತ್ತು ಕಾಲೇಜಿನ ಉಪನ್ಯಾಸಕರು ಪ್ರಶಂಸಿಸಿದರು.ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಚೆನ್ನೈನ ಫ್ರಾನ್ಸಿಸ್, ಸತ್ಯವತಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದರು. ಬಳಿಕ ಇಬ್ಬರೂ ಹಿರಿಯರನ್ನು ಒಪ್ಪಿಸಿ ಸರಳ ವಿವಾಹವಾಗಿರುವುದು ಮೆಚ್ಚುಗೆಗೆ ಪಾತ್ರವಾಯಿತು.