

ನಂಜನಗೂಡು : ನಗರದ ಆರ್.ಪಿ. ರಸ್ತೆ ಮತ್ತು ಎಂ.ಜಿ. ರಸ್ತೆಗಳಲ್ಲಿ ವ್ಯಾಪಾರ-ವಹಿವಾಟು ನಡೆಸುವ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದ ಫುಟ್‌ಪಾತ್ ಅನ್ನು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನಗರಸಭೆ ಮತ್ತು ಸಂಚಾರ ಪೊಲೀಸರ ಜತೆಗೂಡಿ ಸೋಮವಾರ ಕಾರ್ಯಾಚರಣೆ ನಡೆಸಿ ತೆರವು ಮಾಡಲಾಯಿತು.
ಈಗಾಗಲೇ ಸಾಕಷ್ಟು ಭಾಗಗಳಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು. ಎಚ್ಚೆತ್ತ ನಂಜನಗೂಡು ಪಟ್ಟಣದ ಸಂಚಾರ ಪೊಲೀಸ್ ಠಾಣೆ ಪಿಎಸ್‌ಐ ಕೃಷ್ಣಕಾಂತ್ ಕೋಳಿ ಮತ್ತು ನಗರಸಭೆ ಆಯುಕ್ತ ವಿಜಯ್ ನೇತೃತ್ವದಲ್ಲಿ ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಫುಟ್ ಪಾತ್ ಆವರಿಸಿಕೊಂಡಿದ್ದ ಅಂಗಡಿ ಶೆಲ್ಟರ್‌ಗಳನ್ನು ತೆರವು ಮಾಡಿಸಲಾಯಿತು. ಮೂರ್ನಾಲ್ಕು ದಿನಗಳ ಹಿಂದೆ ವ್ಯಾಪಾರಸ್ಥರಿಗೆ ನೋಟಿಸ್ ನೀಡಲಾಗಿತ್ತು. ಮುಂಬರುವ ದಿನಗಳಲ್ಲಿ ಅನಧಿಕೃತವಾಗಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಲ್ಲಿ ಪ್ರಕರಣ ದಾಖಲು ಮಾಡಬೇಕಾಗುತ್ತದೆ ಎಂದು ಸಂಚಾರ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ನಗರಸಭೆ ಪರಿಸರ ಇಂಜಿನಿಯರ್ ಮೈತ್ರೇಯ ದೇವಿ ಸೇರಿದಂತೆ ಪೊಲೀಸ್ ಮತ್ತು ನಗರಸಭಾ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.