

ಮಂಡ್ಯ: ಜಾತಿಗಳ ಹೆಸರಿನಲ್ಲಿ ಹಿಂದು ಸಮುದಾಯಗಳನ್ನು ವಿಭಜನೆ ಮಾಡುವುದು ಕಾಂಗ್ರೆಸ್ ಸರ್ಕಾರದ ಜಾತಿ ಗಣತಿ ಹಿಂದಿರುವ ಷಡ್ಯಂತ್ರ ಎಂದು ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.
ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಅವರಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ-ದುರ್ಗಾವಾಹಿನಿ, ಶ್ರೀರಾಮಾಂಜನೇಯ ಮಹೋತ್ಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಶೋಭಾಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಹಿಂದುಗಳನ್ನು ವೀರಶೈವ, ಲಿಂಗಾಯತ, ಒಕ್ಕಲಿಗ, ಕುರುಬ, ಕುಂಬಾರ ಹೀಗೆ ಜಾತಿ ಹೆಸರಿನಲ್ಲಿ ಗುರುತಿಸಿ ವಿಭಜಿಸಲಾಗುತ್ತಿದೆ. ಮುಸಲ್ಮಾನರಲ್ಲಿ ಅನೇಕ ಜಾತಿಗಳಿವೆ. ಅವರನ್ನು ಜಾತಿ ಹೆಸರಿನಲ್ಲಿ ಗುರುತಿಸುವ ಪ್ರಯತ್ನಕ್ಕೆ ಯಾರೊಬ್ಬರೂ ಮುಂದಾಗಲಿಲ್ಲ. ಅವರಲ್ಲಿರುವ ಎಲ್ಲ ಜಾತಿಯವರನ್ನು ಒಟ್ಟಾಗಿ ಮುಸಲ್ಮಾನರು ಎಂದು ಗುರುತಿಸುತ್ತಾ ಹಿಂದುಗಳನ್ನು ಒಡೆದು ಆಳುತ್ತಿದ್ದಾರೆ. ಮುಸಲ್ಮಾನರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೋರಿಸುವುದರೊಂದಿಗೆ ಬಜೆಟ್‌ನಲ್ಲಿ ದೊಡ್ಡ ಪಾಲನ್ನು ನೀಡುವುದು ಕಾಂಗ್ರೆಸ್ ನೀತಿಯಾಗಿದೆ. ಇದು ಮುಸ್ಲಿಮರ ತುಷ್ಠೀಕರಣವಲ್ಲದೆ ಮತ್ತೇನು ಎಂದು ಟೀಕಿಸಿದರು.
ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಕಾಲದಿಂದಲೂ ಮುಸ್ಲಿಮರ ತುಷ್ಠೀಕರಣ ನೀತಿ ಅನುಸರಿಸುತ್ತಾ ಬಂದಿದ್ದಾರೆ. ಉಜ್ಜಯಿನಿ ಜ್ಯೋತಿರ್ಲಿಂಗ ದೇಗುಲ ಮುಸ್ಲಿಮರ ದಾಳಿಗೊಳಗಾಗಿ ನಾಶವಾಗಿತ್ತು. ಅದರ ಪುನರ್‌ನಿರ್ಮಾಣಕ್ಕೆ ಹಣ ಕೇಳಿದಾಗ ಮುಸಲ್ಮಾನರಿಗೆ ನೋವಾಗುತ್ತದೆ ಎಂದು ನೆಹರು ಹಣ ಕೊಡಲಿಲ್ಲ. ಕೊನೆಗೆ ಹಿಂದುಗಳೇ ಹಣ ಸಂಗ್ರಹಿಸಿ ದೇಗುಲ ಮರು ನಿರ್ಮಾಣ ಮಾಡಿದರು. ಅಂಬೇಡ್ಕರ್ ಕಾಶ್ಮೀರದಲ್ಲಿ 370ನೇ ವಿಧಿ ಜಾರಿಗೊಳಿಸುವುದನ್ನು ವಿರೋಧಿಸಿದ್ದರು. ಮುಸಲ್ಮಾನರ ತುಷ್ಠೀಕರಣಗೊಳಿಸುವ ಏಕೈಕ ಉದ್ದೇಶದಿಂದ ನೆಹರು ಜಾರಿಗೊಳಿಸಿದರು ಎಂದರು.
ಶ್ರೀರಾಮನನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಅನುಯಯಿಗಳಿದ್ದಾರೆ. ಥೈಲ್ಯಾಂಡ್ ದೇಶದ ರಾಜ ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ಪ್ರಮಾಣವಚನ ಸ್ವೀಕರಿಸುತ್ತಾರೆ. ಕಾಂಬೋಡಿಯಾದಲ್ಲೂ ಶ್ರೀರಾಮನಿಗೆ ಮಹತ್ವದ ಸ್ಥಾನವಿದೆ. ಹಿಂದು ಧರ್ಮ ಸುಮಾರು 25 ಸಾವಿರ ವರ್ಷಗಳಷ್ಟು ಹಳೆಯದ್ದಾಗಿದ್ದು, ವಿಶ್ವದ ಜನರಿಗೆ ಬಟ್ಟೆ ಹಾಕುವುದನ್ನು ಕಲಿಸಿದ್ದು ಹಿಂದು ಧರ್ಮದವರು ಎಂದು ಎದೆತಟ್ಟಿಕೊಂಡು ಹೇಳಿದರು.
ಸಮಾರಂಭ ಉದ್ಘಾಟಿಸಿದ ಕೆಂಗೇರಿ ವಿಶ್ವಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಹಿಂದು ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದ ಅವರು. ಹಿಂದು ಧರ್ಮ ಜಾತಿ, ಮತ, ಆರ್ಥಿಕತೆ, ವರ್ಣಬೇಧವೆಂಬ ಮೇಲು-ಕೀಳೆಂಬ ವಿಘಟನೆಯಿಂದ ಹೊರಬರಬೇಕೆಂದು ಕರೆ ನೀಡಿದರು.
ಭಾರತೀಯರೆಲ್ಲರೂ ಹಿಂದು ಧರ್ಮದ ಮೌಢ್ಯ, ಬಡತನ ನಿವಾರಣೆಗೆ ಕಟಿಬದ್ಧರಾಗಿ ಶ್ರಮಿಸಬೇಕು. ಪ್ರತಿಯೊಬ್ಬರೂ ಸಹೋದರತ್ವದಿಂದ ಬಾಳ್ವೆ ನಡೆಸುವ ಹೊಣೆಗಾರಿಕೆ ಹೊರಬೇಕು. ಧರ್ಮವನ್ನು ರಕ್ಷಿಸುವ ಉದ್ದೇಶದಿಂದ ಎದುರಾಗುವ ಅನಾಹುತ, ಅಡಚಣೆಗಳು, ಆಕ್ರಮಗಳು, ದುರಾಚಾರ ಮತ್ತು ಅನಾಚಾರಗಳನ್ನು ತಡೆಯಲು ಒಗ್ಗೂಡಬೇಕೆಂದು ಪ್ರತಿಪಾದಿಸಿದರು.
ಭಾರತೀಯರ ಸಂಸ್ಕೃತಿಯಾಗಿರುವ ಹಿಂದು ಧರ್ಮದಲ್ಲಿರುವ ಜಾತೀಯತೆ, ದೇವಾಲಯ ಪ್ರವೇಶಕ್ಕೆ ನಿರಾಕರಣೆ, ಮತ್ತಿತರ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿ ಅನ್ಯ ಧರ್ಮಿಯರನ್ನೂ ಪ್ರೀತಿಸುವ ಮೂಲಕ ನಮ್ಮ ಧರ್ಮದ ಆಚರಣೆಗೆ ಒಲವು ತೋರಬೇಕು ಎಂದು ಕರೆ ನೀಡಿದ ಅವರು, ಸಮಾವೇಶ ಮತ್ತು ಜಾಗೃತಿ ಸಭೆಗಳು ಧರ್ಮವನ್ನು ವಿರೋಧಿಸುವುದನ್ನು ಸಹಿಸುವುದಿಲ್ಲ ಎಂಬ ಸಂದೇಶ ಸಾರಬೇಕು. ಆ ಮೂಲಕ ಭಯೋತ್ಪಾದಕ ಶಕ್ತಿ ಹಿಮ್ಮೆಟ್ಟಿಸಲು ನಾವು ಶಕ್ತರಾಗಿದ್ದೇವೆ. ವಿಶಾಲವಾದ ನೆಲದಲ್ಲಿ ಪ್ರಕೃತಿ ಮತ್ತು ಸರ್ಕಾರಗಳು ನೀಡುವ ಸವಲತ್ತುಗಳನ್ನು ಸ್ವೀಕರಿಸುವ ಅನ್ಯ ಧರ್ಮಿಯರೂ ಈ ದೇಶದ ಸಂಸ್ಕೃತಿ ಮತ್ತು ಘನತೆಯ ರಕ್ಷಣೆಗೆ ಮುಂದಾಗಬೇಕು. ಮಂಡ್ಯ ಜಿಲ್ಲೆಯ ಜನರು ಸುಸಂಸ್ಕೃತರಾಗಿದ್ದು, ಮೇಲ್ನೋಟಕ್ಕೆ ಒರಟರಂತೆ ಕಂಡರೂ, ಉದಾರವಾದಿಗಳಾಗಿದ್ದಾರೆ. ಮಾನವೀಯತೆಯ ನೆಲೆಯುಳ್ಳ ಜಿಲ್ಲೆಯ ಜನರು ಇತರರನ್ನೂ ಪೋಷಿಸುವ ಹಾಗೂ ರಕ್ಷಿಸುವ ಕಾರ‌್ಯದಲ್ಲಿ ಸದಾ ಮುಂದಾಗಿರುತ್ತಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
ವಿಶ್ವ ಹಿಂದು ಪರಿಷತ್‌ನ ಜಿಲ್ಲಾಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮ, ವಿಎಚ್‌ಪಿ ಮೈಸೂರು ವಿಭಾಗ ಸಹ ಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು, ಧರ್ಮಪ್ರಸಾರ ಪ್ರಮುಖ್ ಸೂರ್ಯನಾರಾಯಣ, ನಿವೃತ್ತ ಪೊಲೀಸ್ ಅಧಿಕಾರಿ ಬಲರಾಮೇಗೌಡ, ವಿಹಿಂಪ ಕಾರ್ಯದರ್ಶಿ ರಾಘವೇಂದ್ರ, ನಿವೃತ್ತ ಯೋಧ ಸಿಪಾಯಿ ಶ್ರೀನಿವಾಸ್, ಬಜರಂಗದಳ ಸಂಯೋಜಕರಾದ ಬಸವರಾಜು, ಸುನೀತ್, ದುರ್ಗಾವಾಹಿನಿ ಪ್ರಮುಖ್ ರೇಖಾ ಇತರರಿದ್ದರು.