ಕೇಸರಿ ಸಾಗರದಲ್ಲಿ ಶೋಭಾಯಾತ್ರೆ

mlk Shoba yatre. sep- 24. (2)
Published on

ಮೊಳಕಾಲ್ಮೂರು: ಶಿಕ್ಷಣ ಇಲಾಖೆ, ತಿಲಕ್ ನಗರ, ಶ್ರೀನಿವಾಸ ನಾಯಕ ಬಡಾವಣೆ ಹಾಗೂ ಬಾಯ್ಸ ಸ್ಕೂಲ್ ಮೈದಾನದಲ್ಲಿ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ಮೂರ್ತಿಗಳ ವಿಸರ್ಜನೆ ಶೋಭಾಯಾತ್ರೆ ಪಟ್ಟಣದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ನುಂಕಪ್ಪನ ದೇವಸ್ಥಾನದಿಂದ ಹೊರಟ ಮೆರವಣಿಗೆ ಪ್ರಮುಖ ರಸ್ತೆಯಲ್ಲಿ ಸಾಗಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಅಲಂಕೃತ ಟ್ರಾೃಕ್ಟರ್‌ಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಶಾಸಕ ಎನ್.ವೈ.ಗೋಪಾಲಕೃಷ್ಣ ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತು.

ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶೋಭಾಯಾತ್ರೆ ಸಂಜೆ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಎಲ್ಲೆಲ್ಲೂ ಕೇಸರಿಯದೇ ರಂಗು. ಧ್ವಜಗಳು, ಪೇಟಾ, ಹೆಗಲ ಮೇಲೆ ಹಾಕಿದ್ದ ವಸ್ತ್ರ ಎಲ್ಲವೂ ಕೇಸರಿಮಯ. ಮಕ್ಕಳು, ಯುವಕ-ಯುವತಿಯರು, ಹಿರಿಯರು ಹೀಗೆ ಎಲ್ಲ ವಯಸ್ಸಿನವರೂ ಪಾಲ್ಗೊಂಡು ಸಂಭ್ರಮಿಸಿದರು.

ತಮಟೆ, ಡಿಜೆ, ಚಂಡೆ ಸೇರಿ ವಿವಿಧ ವಾದ್ಯಗಳು, ಕಲಾ ತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದ್ದವು. ಡಿಜೆ ಮೂಲಕ ಹೊರ ಹೊಮ್ಮುತ್ತಿದ್ದ ಹಾಡುಗಳಿಗೆ ಯುವಜನರನ್ನು ಹುಚ್ಚೆದ್ದು ಕುಣಿದರು.

ಭಕ್ತರು ಗಣಪತಿ ಮೂರ್ತಿ ಮುಂದೆ ನಿಂತು ಸೆಲ್ಫಿ ಪಡೆದುಕೊಂಡರು. ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತಿದ್ದ ಜನರು ಶೋಭಾಯಾತ್ರೆ ವೈಭವವನ್ನು ಕಣ್ತುಂಬಿಕೊಂಡರು.

ಶೋಭಾಯಾತ್ರೆ ಸಾಗಿದ ಮಾರ್ಗದಲ್ಲಿ ಹಲವು ದಾನಿಗಳು ಮಜ್ಜಿಗೆ ಇತರ ಪ್ರಸಾದ ವ್ಯವಸ್ಥೆ ಮಾಡಿದ್ದರು. ಶೋಭಾಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಪೊಲೀಸರ ಸರ್ಪಗಾವಲಿತ್ತು.

ಹೆಜ್ಜೆ ಹಾಕಿದ ಎನ್‌ವೈಜಿ: ಶೋಭಾ ಯಾತ್ರೆಯಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ಪಾಲ್ಗೊಂಡು, ಯುವ ಪೀಳಿಗೆಯಲ್ಲಿ ಉತ್ಸಾಹಕ್ಕೆ ಕಾರಣರಾದರು.

ಬೆಳಕು ಸರಿದರೂ ಕುಂದದ ಉತ್ಸಾಹ: ರಸ್ತೆಗಳ ತುಂಬ ಜನವೋ ಜನ. ಕಣ್ಣು ಹಾಯಿಸಿದಷ್ಟೂ ದೂರ ಜನಸಾಗರ ಇತ್ತು. ಬೆಳಗ್ಗೆ 11ಕ್ಕೆ ಆರಂಭವಾದ ಈ ಸಡಗರ ಬೆಳಕು ಸರಿದು ಕತ್ತಲು ಆವರಿಸಿದರೂ ಕಡಿಮೆಯಾಗಲಿಲ್ಲ. ಹಾಡು, ಕುಣಿತಗಳು ನಿಲ್ಲಲೇ ಇಲ್ಲ. ಡಿಜೆ ಸದ್ದಿನ ಜತೆಗೆ ದೀಪಗಳ ಬೆಳಕು ಆವರಿಸಿತ್ತು. ಕೋಟೆ ಬಡಾವಣೆಯಲ್ಲಿನ ಕಲ್ಯಾಣಿಯಲ್ಲಿ ತಡರಾತ್ರಿ ವಿಸರ್ಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net