ಸಕ್ಕರೆನಾಡಲ್ಲಿ ಅದ್ದೂರಿ ಶೋಭಾಯಾತ್ರೆ: ನಗರದಲ್ಲಿ ಬೃಹತ್ ಮೆರವಣಿಗೆ

Shobhayatra celebration Mandya
Published on

ಮಂಡ್ಯ: ನಗರದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು.

ಹಿಂದು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ, ಹಿಂದು ಧಾರ್ಮಿಕ ಆಚರಣೆಗಳ ವೇಳೆ ಅಹಿತಕರ ಘಟನೆಗಳನ್ನು ಖಂಡಿಸಿ ಹಾಗೂ ಸಾರ್ವಜನಿಕ ಆಸ್ತಿಗಳನ್ನು ವಕ್ಫ್‌ಗೆ ವರ್ಗಾಯಿಸಿ ಅನ್ಯಾಯ ಎಸಗುವುದರ ವಿರುದ್ದ ಜಾಗೃತಿ ಮೂಡಿಸಲು ಆಯೋಜಿಸಿದ್ದ ಶೋಭಾಯಾತ್ರೆ ಯಶಸ್ವಿಯಾಗಿ ಮುಕ್ತಾಯವಾಯಿತು.

ವಿಶ್ವ ಹಿಂದು ಪರಿಷತ್, ಬಜರಂಗದಳ-ದುರ್ಗಾವಾಹಿನಿ ಮತ್ತು ಶ್ರೀರಾಮಾಂಜನೇಯ ಮಹೋತ್ಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಯಾತ್ರೆಗೆ ಶಕ್ತಿದೇವತೆ ಕಾಳಿಕಾಂಬ ದೇವಾಲಯದ ಆವರಣದಲ್ಲಿ ವಿಶ್ವ ಹಿಂದು ಪರಿಷತ್ ರಾಜ್ಯ ಕಾರ್ಯದರ್ಶಿ ಜಗನ್ನಾಥ್‌ಶಾಸ್ತ್ರಿ ಚಾಲನೆ ನೀಡಿದರು. ಬಳಿಕ ಹೊರಟ ಶೋಭಾಯಾತ್ರೆ ಪೇಟೆ ಬೀದಿ, ಕಾಮನ ವೃತ್ತ, ಹೊಳಲು ವೃತ್ತ, ಎಂಡಿಸಿಸಿ ಬ್ಯಾಂಕ್ ರಸ್ತೆ, ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಮೈಸೂರು-ಬೆಂಗಳೂರು ಹೆದ್ದಾರಿ, ಮಹಾವೀರ ವೃತ್ತ, ವಿ.ವಿ. ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಕರ್ನಾಟಕ ಬಾರ್ ವೃತ್ತ, ಕನ್ನಿಕಾ ಪರಮೇಶ್ವರಿ ದೇವಾಲಯ, ವಿನೋಭ ರಸ್ತೆ ಮಾರ್ಗವಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಮಂಡ್ಯ ವಿವಿ ಆವರಣದಲ್ಲಿ ಮುಕ್ತಾಯವಾಯಿತು.

Shobhayatra celebration.

ಶ್ರೀರಾಮ, ಉಗ್ರ ನರಸಿಂಹ, ಆಂಜನೇಯನ ಬೃಹತ್ ಗಾತ್ರದ ಟ್ಯಾಬ್ಲೋಗಳು, ಪೂಜಾ ಕುಣಿತದೊಂದಿಗೆ ಆಂಜನೇಯಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಶೋಭಾಯಾತ್ರೆ ನಡೆಯಿತು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಹಿಂದು ಸಂಘಟನೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಇನ್ನು ಶೋಭಾಯಾತ್ರೆ ಆಗಮಿಸುತ್ತಿದ್ದಂತೆ ಸಾರ್ವಜನಿಕರು ದೇವರು ಮತ್ತು ಹಿಂದು ಕಾರ್ಯಕರ್ತರ ಮೇಲೆ ಹೂಮಳೆಗರೆದರು. ಮಾರ್ಗದುದ್ದಕ್ಕೂ ರಸ್ತೆಯಲ್ಲಿ ನೀರು ಹಾಕಿ ರಂಗೋಲೆ ಬಿಡಿಸುತ್ತಿದ್ದ ದೃಶ್ಯ ಕಂಡುಬಂತು.

ಮೊಳಗಿದ ಜೈ ಶ್ರೆರಾಮ್ ಘೋಷಣೆ: ಶೋಭಾಯಾತ್ರೆಯಲ್ಲಿ ಬರುತ್ತಿದ್ದ ಕಾರ್ಯಕರ್ತರಿಗೆ ಸಾರ್ವಜನಿಕರು ನೀರು, ಮಜ್ಜಿಗೆ ನೀಡುತ್ತಿದ್ದರು. ಯಾತ್ರೆಯಲ್ಲಿ ಸಾಗುತ್ತಿದ್ದ ಕಾರ್ಯಕರ್ತರು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಮೊಳಗಿಸಿದರು. ಮತ್ತೆ ಕೆಲವರು ತಮಟೆ ಸದ್ದಿಗೆ ಹೆಜ್ಜೆ ಹಾಕಿದರೆ, ಒಂದಷ್ಟು ಜನ ಡಿಜೆ ಸೌಂಡ್ ಹೆಜ್ಜೆ ಹಾಕುತ್ತಿದ್ದುದು ಕಂಡುಬಂತು. ಯುವಕ, ಯುವತಿಯರು ಕುಣಿದು, ಕುಪ್ಪಳಿಸಿದರು.

Shobhayatra celebration

ಶೋಭಯಾತ್ರೆ ನಡೆಯುವ ಮಾರ್ಗದಲ್ಲಿ ಬಸ್ ಹಾಗೂ ಇತರೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಪೊಲೀಸರು ವಾಹನಗಳನ್ನು ಶೋಭಾಯಾತ್ರೆ ಸಂಚರಿಸುವ ಮಾರ್ಗದಿಂದ ಸ್ವಲ್ಪ ದೂರವೇ ಮಾರ್ಗ ಬದಲಾವಣೆ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಗರದ ಪೇಟೆ ಬೀದಿ, ಹೊಳಲು ವೃತ್ತ, ಜೆ.ಸಿ.ವೃತ್ತ, ಹೆದ್ದಾರಿ, ಮಹಾವೀರ ವೃತ್ತ, ವಿ.ವಿ. ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಕೇಸರಿ ತೋರಣ ಕಟ್ಟುವ ಮೂಲಕ ಇಡೀ ನಗರವನ್ನು ಕೇಸರಿಮಯವನ್ನಾಗಿಸಲಾಗಿತ್ತು. ಈ ಬಾರಿಯ ಶೋಭಾಯಾತ್ರೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷವಾಗಿತ್ತು.

Shobhayatra celebration Mandya

ಬಿಗಿ ಬಂದೋಬಸ್ತ್: ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸ್ವತಃ ಎಸ್ಪಿಯವರೇ ಶೋಭಯಾತ್ರೆ ತೆರಳುವ ಮಾರ್ಗದಲ್ಲಿ ಬಂದೋಬಸ್ತ್‌ನಲ್ಲಿ ಭಾಗವಹಿಸಿ ಪೊಲೀಸರಿಗೆ ಸೂಚನೆಗಳನ್ನು ನೀಡುತ್ತಿದ್ದರು. ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ, 6 ಜನ ಡಿವೈಎಸ್ಪಿ, 25 ಜನ ಇನ್ಸ್‌ಪೆಕ್ಟರ್, 50 ಜನ ಸಬ್ ಇನ್ಸ್‌ಪೆಕ್ಟರ್ ಹಾಗೂ 700ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net