

ರಾಯಚೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಮಂತ್ರಾಲಯದ ಪ್ರಮುಖ ಬೀದಿಗಳಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಸೋಮವಾರ ಮೂಲ ರಾಮದೇವರ ಶೋಭಾ ಯಾತ್ರೆ ನಡೆಸಲಾಯಿತು.
ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಶ್ರೀಮಠದ ಪ್ರಾಕಾರದಲ್ಲಿ ರಾಮದೇವರ ಮೂರ್ತಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ನಂತರ ವೆಂಕಟೇಶ್ವರ ದೇವಸ್ಥಾನ, ರಾಮಲಿಂಗೇಶ್ವರ ದೇವಸ್ಥಾನ, ಸಂಸ್ಕೃತ ವಿದ್ಯಾಪೀಠ, ಬಸ್ ನಿಲ್ದಾಣದಿಂದ ಸುಶಮೀಂಂದ್ರ ಮಾರ್ಗವಾಗಿ ಶೋಭಾಯಾತ್ರೆ ಪುನಃ ಶ್ರೀಮಠಕ್ಕೆ ಬಂದು ತಲುಪಿತು.
ಯಾತ್ರೆಯಲ್ಲಿ ಶ್ರೀಮಠದ ಸಿಬ್ಬಂದಿ ಹಾಗೂ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ರಾಮ ನಾಮ ಜಪ ಹಾಗೂ ಜಯಘೋಷದೊಂದಿಗೆ ಯಾತ್ರೆಗೆ ಕಳೆ ತಂದಿದ್ದರು. ಯಾತ್ರೆಯಲ್ಲಿ ಗ್ರಾಮದ ಮುಸ್ಲಿಂ ಸಮುದಾಯದ ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ನಂತರ ಶ್ರೀಗಳು ಶ್ರೀಮಠದಿಂದ ಮಂತ್ರಾಲಯದ ಹೊರವಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ 33 ಅಡಿಯ ಏಕಶಿಲಾ ಅಭಯ ರಾಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಆಡಳಿತಾಕಾರಿ ವೆಂಕಟೇಶ ಜೋಷಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.