

ಕುಂದಾಪುರ: ರೈತರ ಕಷ್ಟ ಪರಿಹಾರಕ್ಕೆ ಬೇರೆ ಬೇರೆ ಸಮಿತಿ ವರದಿ, ಕೃಷಿ ತಜ್ಞರ ಅಭಿಪ್ರಾಯ, ಹಿರಿಯ ಕೃಷಿಕರ ಸಲಹೆ ಸೂಚನೆಯಂತೆ ಕೃಷಿ ಮಸೂದೆ ತರಲಾಗುತ್ತಿದ್ದರೂ, ರೈತರ ಹೆಸರಲ್ಲಿ ಪ್ರತಿಭಟನೆ ದುರದೃಷ್ಟಕರ ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ಹೇಳಿದರು.
ಕುಂದಾಪುರ ಬಿಜೆಪಿ ಕಚೇರಿಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಕಾರ‌್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷದವರು ನೂತನ ಸಚಿವರ ಪರಿಚಯಕ್ಕೂ ಅವಕಾಶ ನೀಡದೆ ಗದ್ದಲ ಎಬ್ಬಿಸಿದ್ದರಿಂದ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಜನ ಸಂಪರ್ಕ ಯಾತ್ರೆ ಆರಂಭಿಸಲಾಗಿದೆ ಎಂದರು.
ಹೊಸ ಕೃಷಿ ಕಾಯ್ದೆಯಲ್ಲಿ ಎಪಿಎಂಸಿ ಮತ್ತು ರೈತರ ಅನುಕೂಲ ಸ್ಥಳದಲ್ಲಿ ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶವಿದ್ದರೂ ರೈತರ ಹೆಸರಲ್ಲಿ ದಲ್ಲಾಳಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಹಿತಕ್ಕಾಗಿ, ಮೋದಿ ಹೆಸರಿಗೆ ಕಪ್ಪುಚುಕ್ಕೆ ಬಾರದಂತೆ ಪಾರದರ್ಶಕವಾಗಿ ಕೆಲಸ ಮಾಡುತ್ತೇನೆ ಎಂದರು.
ತನ್ನದಲ್ಲದ ತಪ್ಪಿಗೆ ಹರೀಶ್ ಬಂಗೇರ ಸುಮಾರು ಎರಡು ವರ್ಷ ಜೈಲು ಸೇರಲು ಕಾರಣರಾದವರ ವಿರುದ್ಧ ತೀವ್ರ ಕ್ರಮ ತೆಗೆದುಕೊಳ್ಳದೆ ಬಿಡುವುದಿಲ್ಲ ಎಂದು ಶೋಭಾ ಹೇಳಿದರು.
ಸಂಸತ್ ಚುನಾವಣೆಯಲ್ಲಿ ಎರಡೂ ಬಾರಿ ಕುಂದಾಪುರ ಕ್ಷೇತ್ರ ಅತಿಹೆಚ್ಚು ಮತ ಕೊಟ್ಟಿರುವುದು ಈಗ ಸಚಿವೆಯಾಗಲು ಕಾರಣ. ಮತದಾರರ ನಂಬಿಕೆಗೆ ಹುಸಿ ಬಾರದ ರೀತಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸೌದಿ ಜೈಲಿನಿಂದ ಬಿಡುಗಡೆಯಾಗಿ ಬಂದ ಹರೀಶ್ ಬಂಗೇರ ಹಾಗೂ ಪತ್ನಿ ಸುಮನಾ ಅವರ ಶೋಭಾ ಕರಂದ್ಲಾಜೆ ಸನ್ಮಾನಿಸಿದರು. ಕುಂದಾಪುರ ವಲಯ ಬಿಜೆಪಿ ವತಿಯಿಂದ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ಪ್ರಮುಖರಾದ ಕಿರಣ್ ಕೊಡ್ಗಿ, ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಗೌರವಿಸಿದರು.
ಉಡುಪಿ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಬಿಜೆಪಿ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮುನಿರಾಜು ಗೌಡ, ಜಿಲ್ಲಾ ಪ್ರಧಾನ ಕಾರ‌್ಯದರ್ಶಿಗಳಾದ ಕುತ್ಯಾಡಿ ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ದ.ಕ ಸಹಾಯಕ ಪ್ರಭಾರಿ ರಾಜೇಶ್ ಕಾವೇರಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಉಪ್ಪೂರು, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶ್ರೀಶ ನಾಯಕ್ ಇದ್ದರು.
ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ವಕ್ವಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕೃಷಿ ಕ್ಷೇತ್ರ ವಿಶಾಲವಾಗಿದ್ದು, ಅಡಕೆ, ತೆಂಗು, ಕಾಫಿ, ತೋಟಗಾರಿಕೆ, ಭತ್ತ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇದ್ದು, ರೈತರ ಸ್ನೇಹಿಯಾಗಿ ಕೆಲಸ ಮಾಡುತ್ತೇನೆ. ಮೋದಿ ನೇತೃತ್ವದ ಸರ್ಕಾರ ಶೇ.95ರಷ್ಟು ಬೇಡಿಕೆ ಈಡೇರಿಸಿದೆ. ರೈತರ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಕಾನೂನು ಚೌಕಟ್ಟಿನಡಿ ಪರಿಹಾರ ಮಾಡುವ ಗುರಿ ಹೊಂದಲಾಗಿದೆ.
ಶೋಭಾ ಕರಂದ್ಲಾಜೆ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ