

ಗೋಣಿಕೊಪ್ಪಲು: ಶ್ರೀ ಕಾವೇರಿ ದಸರಾ ಸಮಿತಿಯ 47ನೇ ವರ್ಷದ ಜನೋತ್ಸವದಲ್ಲಿ ಶೋಭಾಯಾತ್ರೆಯನ್ನು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಕಣ್ತುಂಬಿಕೊಂಡರು.
ನಿಗದಿತ ಸಮಯದಲ್ಲಿ ಸ್ವಾತಂತ್ರೃ ಹೋರಾಟಗಾರರ ಭವನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ದೇವಿಯನ್ನು ಅಲಂಕೃತ ಮಂಟಪದಲ್ಲಿ ಕೂರಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಇನ್ನುಳಿದ 9 ಮಂಟಪಗಳು ತಮ್ಮ ಭಾಗದಿಂದ ಹೊರಟು ಬೈಪಾಸ್ ರಸ್ತೆ ಹಾಗೂ ಮಾರುಕಟ್ಟೆ ರಸ್ತೆ ಮಾರ್ಗವಾಗಿ ಉಮಾಮಹೇಶ್ವರಿ ದೇವಾಲಯ ಬಳಿಗೆ ಆಗಮಿಸಿ ನಂತರ ಸಾಲಿನಲ್ಲಿ ಒಂದರ ನಂತರ ಒಂದು ಮಂಟಪಗಳು ಮುಖ್ಯ ಬೀದಿಯಲ್ಲಿ ಸಾಗಿದವು. ನಗರದ ಬಸ್ ನಿಲ್ದಾಣದಲ್ಲಿ ಮಂಟಪಗಳು ಪ್ರದರ್ಶನ ನೀಡುವ ಮೂಲಕ ಜನರ ಗಮನ ಸೆಳೆದವು.
ಈ ಬಾರಿ ಅರುವತ್ತೋಕ್ಲು ಶಾರದಾಂಬ ದಸರಾ ಸಮಿತಿ ಹೊರ ತಂದ ಧೂಮ್ರಲೋಚನ ಸಂಹಾರ, ಕೌಶಿಕೆ ಮಹಾತ್ಮೆಯ ಕಥಾ ರೂಪಕ ಪ್ರಥಮ ಸ್ಥಾನ ಪಡೆಯಿತು. ಶತಮಹಿಷಿ ಕಥಾ ಪ್ರಸಂಗಕ್ಕೆ ಸ್ನೇಹಿತರ ಬಳಗ ಕೊಪ್ಪ ದ್ವಿತೀಯ ಬಹುಮಾನ ಗಿಟ್ಟಿಸಿತು. ಮೂರನೇ ಬಹುಮಾನವನ್ನು ಕಾಡ್ಲಯ್ಯಪ್ಪ ದಸರಾ ಸಮಿತಿಯ ಕೌಶಿಕ ಮಹಾತ್ಮೆ ಪಡೆದುಕೊಂಡಿತು.
ಉಳಿದಂತೆ ಕಾವೇರಿ ದಸರಾ ಸಮಿತಿ, ಕೈಕೇರಿ ಭಗವತಿ, ನಾಡಹಬ್ಬ ದಸರಾ ಸಮಿತಿ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ಶಾರದಾಂಬ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಸರ್ವರ ದಸರಾ ಸಮಿತಿ, ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ, ಸ್ನೇಹಿತರ ಬಳಗ ಕೊಪ್ಪ, ಮಂಟಪಗಳೊಂದಿಗೆ ಡಿಜೆ ಸೌಂಡ್ಸ್ ಹಾಗೂ ಕೊಡವ ವಾಲಗಕ್ಕೆ ಯುವಕ, ಯುವತಿಯರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.
ಶ್ರೀ ಕಾವೇರಿ ದಸರಾ ಸಮಿತಿಯ 47ನೇ ವರ್ಷದ ದಸರಾ ಜನೋತ್ಸವ ಉತ್ತಮವಾಗಿ ಮೂಡಿ ಬಂದವು. ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ, ಖಜಾಂಚಿ ಧ್ಯಾನ್ ಸುಬ್ಬಯ್ಯ, ಉಪಾಧ್ಯಕ್ಷ ಶಿವಾಜಿ, ಸಂಯೋಜಕ ಚಂದನ್ ಕಾಮತ್ ಇತರು ಇದ್ದರು.
ಮುಂಜಾನೆ 5.30ರಲ್ಲಿ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಶ್ರೀ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಹರಿಶ್ಚಂದ್ರಪುರದ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲಾಯಿತು.
ಡಿವೈಎಸ್‌ಪಿ ಮಹೇಶ್‌ಕುಮಾರ್ ಸಮ್ಮುಖದಲ್ಲಿ 600ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಮುಂಜಾನೆ 9 ಗಂಟೆ ನಂತರ ವಾಹನಗಳನ್ನು ಮುಖ್ಯ ರಸ್ತೆಯಲ್ಲಿ ಬಿಡಲಾಯಿತು. ನಿರೀಕ್ಷೆಗೂ ಮೀರಿದ ಜನರು ಈ ಬಾರಿ ದಸರಾ ವೀಕ್ಷಣೆಗೆ ಆಗಮಿಸಿದ್ದರು.