

ಬಸವನಬಾಗೇವಾಡಿ: ಪಟ್ಟಣದ ತಾಳಿಕೋಟೆ ರಸ್ತೆಯ ಮಿನಿ ವಿಧಾನಸೌಧ ಎದುರುಗಡೆ ಇರುವ ಕೋಣಿನವರ ತೋಟದಲ್ಲಿ ಶಿವಯೋಗೀಶ್ವರ ಜಾತ್ರಾ ಮಹೋತ್ಸವ ಶುಕ್ರವಾರ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಬೆಳಗ್ಗೆ 10 ಗಂಟೆಗೆ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ವೈಭವದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಕುಂಭಮೇಳದೊಂದಿಗೆ ಬಸವತೀರ್ಥ ಗಂಗಸ್ಥಳಕ್ಕೆ ತೆರಳಿತು. ಅಲ್ಲಿ ಗಂಗೆ ಪೂಜೆ ನಂತರ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ತೆರಳಿತು. ನಂತರ ದೇವಸ್ಥಾನದ ಕರ್ತೃಗದ್ದುಗೆಗೆ ಕುಂಭಾಭಿಷೇಕ ನೆರವೇರಿಸಲಾಯಿತು.
ಸಂಜೆ 4ಕ್ಕೆ ಪುರವಂತರು, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವದೊಂದಿಗೆ ಅಗ್ಗಿ ಹಾಯುವ ಕಾರ್ಯಕ್ರಮ ಜರುಗಿತು. ನಂತರ ಬೆಳಗ್ಗೆಯಿಂದ ಸಂಜೆವರೆಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಯಿತು. ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮದ ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ತೆರಳಿ ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿ ದರ್ಶನ ಪಡೆದರು.
ರಾತ್ರಿ 9ಕ್ಕೆ ಸೊಲ್ಲಾಪುರ ಹಾಗೂ ಕಲಬುರ್ಗಿ ಜಿಲ್ಲೆಯ ಡೊಳ್ಳಿನ ಕಲಾವಿದರಿಂದ ಡೊಳ್ಳಿನ ಹಾಡಕಿ ಪದಗಳು, ಇಡಿ ರಾತ್ರಿ ಜಾಗರಣೆ ಕಾರ್ಯಕ್ರಮ ಜರುಗಿತು.
ಪಲ್ಲಕ್ಕಿ ಉತ್ಸವದಲ್ಲಿ ಜಾತ್ರಾ ಮಹೋತ್ಸವದ ಅಧ್ಯಕ್ಷ ಅಪ್ಪು ವಾಡೇದ, ಬಸವರಾಜ ಹಾರಿವಾಳ, ರವಿ ಹಿರೇಮಠ, ಮಲ್ಲಪ್ಪ ಕೋಣಿನ, ಶಿವಾನಂದ ಬಾವೂರ, ವೀರಭದ್ರಪ್ಪ ತೋಟದ, ಸಂಗಪ್ಪ ಕೋಣಿನ, ಶೇಖಪ್ಪ ಹೂಗಾರ, ಮಾದೇವಿ ಮುಳವಾಡ, ನೀಲಮ್ಮ ಮಲಗೊಂಡ, ಶರಣು ಕೂಡಗಿ, ಸುನಂದ ವಾಡೇದ, ಬಸಮ್ಮ ಕೋಣಿನ, ಸವಿತಾ ಕಲ್ಯಾಣ, ಗೀತಾ ವಾಡೇದ, ಕಾಶಿಬಾಯಿ ಬಾವೂರ, ಶರಣಮ್ಮ ವಾಡೇದ, ಶಿವರಾಜ ಜಂಗಿ, ಮಹೇಶ ಹಿರೇಕುರುಬರ, ಪ್ರಭುಗೌಡ ಪಾಟೀಲ, ಸದಾಶಿವಪ್ಪ ಹೊನವಾಡ, ಗುರುರಾಜ ಬಾವೂರ, ರಾಘವೇಂದ್ರ ಕುಲಕರ್ಣಿ ಇತರರಿದ್ದರು.