ಶಿವು ಉಪ್ಪಾರ ಸಾವು ಪ್ರಕರಣ ಸಿಬಿಐಗೆ ವಹಿಸಿ

4545
Published on

ಬೆಳಗಾವಿ: ಗೋ ರಕ್ಷಕ ಶಿವು ಉಪ್ಪಾರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿ ಆವರಣದಲ್ಲಿ 2020ರ ಮೇ 25 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಶಿವು ಉಪ್ಪಾರ ಶವ ಪತ್ತೆಯಾಗಿತ್ತು. ಅದಕ್ಕೂ ಮುನ್ನ ಆತ ಮಾಡಿದ್ದ ವಿಡಿಯೋದಲ್ಲಿ ಅನಧಿಕೃತ ಜಾನುವಾರು ಸಾಗಣೆ ಕುರಿತು ಮಾಹಿತಿ ನೀಡಿ, ತನ್ನ ಕೊಲೆಗೆ ಗೋ ಕಳ್ಳರು 50 ಲಕ್ಷ ರೂ. ಸುಪಾರಿ ಕೊಟ್ಟಿರುವುದಾಗಿ ಹೇಳಿದ್ದನು.

ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಘಟನೆ ನಡೆದು ವರ್ಷ ಕಳೆಯುತ್ತ ಬಂದರೂ ಪೊಲೀಸರು ತನಿಖೆ ಪೂರ್ಣಗೊಳಿಸಿಲ್ಲ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐಗೆ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಶ್ರೀರಾಮ ಸೇನೆ ಮುಖಂಡರಾದ ವಿನಯ ಅಂಗ್ರೊಳ್ಳಿ, ರವಿಕುಮಾರ ಕೋಕಿತರ, ಲಕ್ಕಿ ಕುರಂಗಿ, ರವಿ ಕುಮರಗಿ, ಸಚಿನ ತುಪ್ಪದ, ರೂಪೇಶ ಕೋರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net