

ಮಡಿಕೇರಿ: ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಯಾವುದೇ ಕಾರಣ ನೀಡದೆ ನನ್ನನ್ನು ಕೈಬಿಡಲಾಯಿತು. ಈವರೆಗೂ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಯಾಕೆ ತೆಗೆಯಲಾಗಿದೆ ಎಂದು ನನಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ನಾನು ರಾಜಕೀಯ ಸನ್ಯಾಸ ಸ್ವೀಕರಿಸಲಾರೆ ಎಂದಿರುವ ಅವರು, ಮುಂದೆ ಸಕ್ರೀಯ ರಾಜಕಾರಣದಲ್ಲಿಯೇ ಮುಂದುವರಿಯಲಿದ್ದೇನೆ. ಇಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ನೀಡಿದ್ದು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪನವರಿಗೆ ರಾಜೀನಾಮೆ ಪತ್ರ ರವಾನಿಸಿದ್ದೇನೆ. ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ರಾಜೀನಾಮೆ ಪತ್ರ ಕಳುಹಿಸಲಾಗವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಡಗಿನ ಕಾಂಗ್ರೆಸ್ ಪಕ್ಷದಲ್ಲಿ ೧೯೯೮ ರಿಂದಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದೆ. ಕುಟ್ಟ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ, ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ, ಕುಟ್ಟ ಗ್ರಾ.ಪಂ.ಸದಸ್ಯರಾಗಿ, ಗ್ರಾ.ಪಂ.ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೆ. ಆದರೆ, ಪಕ್ಷದಿಂದ ಯಾಕಾಗಿ ತೆರವುಗೊಳಿಸಲಾಗಿದೆ ಎಂದು ತಿಳಿಸಿಲ್ಲ ಎಂದು ಹೇಳಿದರು.
ಕ್ರಮ ಕೈಗೊಳ್ಳಲು ಆಗ್ರಹ: ಇತ್ತೀಚೆಗೆ ’ಹಿಂದೂಗಳಿಗೆ ರಕ್ಷಣೆ ಕೊಡದ ಬಿಜೆಪಿ ಸರ್ಕಾರ’ ಎಂದು ನೀಡಿದ್ದ ಪತ್ರಿಕಾ ಹೇಳಿಕೆಯ ಕೊನೆಯಲ್ಲಿ ಎಸ್‌ಡಿಪಿಐ ಸಂಘಟನೆಯ ಪದಾಧಿಕಾರಿಗಳ ಹೆಸರನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ತನ್ನ ತೇಜೋವಧೆ ಮಾಡಲಾಗುತ್ತಿದ್ದು, ರಾಜಕೀಯ ವೈಷ್ಯಮ್ಯ ಬೆಳೆಯುವಂತೆ ಮಾಡಲಾಗಿದೆ. ಈ ರೀತಿ ಮಾಡಿ ನನ್ನ ವರ್ಚಸ್ಸು ಹಾಗೂ ಹೆಸರನ್ನು ದುರ್ಬಳಕೆ ಮಾಡಿ ನನಗೆ ರಾಜಕೀಯವಾಗಿ ವೈರುತ್ವ ಹಾಗೂ ನಷ್ಟ ಉಂಟು ಮಾಡುವ ಹುನ್ನಾರ ನಡೆದಿದೆ. ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕರಾದ ಮಂಜು ಸೋಮಯ್ಯ ಇದ್ದರು.