ಶಿವಶರಣರ ಆದರ್ಶ ಎಲ್ಲರಿಗೂ ಪ್ರೇರಣೆ

23 TKE 1,1
ಅಜ್ಜಂಪುರದಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ 890ನೇ ಜಯಂತಿಯನ್ನು ತಹಸೀಲ್ದಾರ್ ಶಿವಶರಣ ಕಟ್ಟೋಳಿ ಉದ್ಘಾಟಿಸಿದರು.
Published on

ತರೀಕೆರೆ: ಶಿವ ಶರಣರು, ಮಹಾನೀಯರ ಆದರ್ಶ ನಮಗೆಲ್ಲ ಮಾರ್ಗದರ್ಶಿಯಾಗಬೇಕು ಎಂದು ತಹಸೀಲ್ದಾರ್ ಶಿವಶರಣ ಕಟ್ಟೋಳಿ ಹೇಳಿದರು.
ಅಜ್ಜಂಪುರ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಹಡಪದ ಅಪ್ಪಣ್ಣನವರ 890ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಡಪದ ಅಪ್ಪಣ್ಣ 12ನೇ ಶತಮಾನದ ವಚನ ಚಳವಳಿಯ ಹರಿಕಾರರಾಗಿದ್ದರು. ಜಗಜ್ಯೋತಿ ಬಸವಣ್ಣನವರ ಬಾಲ್ಯದ ಒಡನಾಡಿಯಾಗಿದ್ದ ಅಪ್ಪಣ್ಣ ಅನುಭವ ಮಂಟಪದಲ್ಲಿ ಪ್ರಧಾನ ಪಾತ್ರ ವಹಿಸುವ ಜತೆಗೆ ಬಸವಣ್ಣನವರ ಬೆಳವಣಿಗೆಯಲ್ಲೂ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಇವರ ಆದರ್ಶಮಯ ಬದುಕು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದರು.
ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ತಿಪ್ಪೇಶ್ ಮಡಿವಾಳ ಮಾತನಾಡಿ, ರಾಜ್ಯಸರ್ಕಾರ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗುವಷ್ಟು ಅನುದಾನ ಬಿಡುಗಡೆಗೊಳಿಸಿದೆ. ಇದರ ಪ್ರಯೋಜನ ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಈ ಮೂಲಕ ಪ್ರಗತಿಯತ್ತ ದಾಪುಗಾಲಿಡಬೇಕು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಎ.ಸಿ.ಚಂದ್ರಪ್ಪ, ಹಡಪದ ಅಪ್ಪಣ್ಣ ಸಮುದಾಯದ ತಾಲೂಕು ಅಧ್ಯಕ್ಷ ಎಂ.ಸಿ.ಹಾಲಪ್ಪ, ಪ್ರಮುಖರಾದ ಎಚ್.ಆರ್.ಚಂದ್ರಪ್ಪ, ಎಸ್.ಮೋಹನ್ ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net