

ಆಲೂರು : ಮಹಾ ಮಾನವತವಾದಿ ಶಿವಶರಣ ಹಡಪದ ಅಪ್ಪಣ್ಣ ಅವರು, ಬಸಣ್ಣ ಅವರ ಆಪ್ತ ಕಾರ್ಯದರ್ಶಿಯಾಗಿದ್ದವರು ಎಂದು ತಹಸೀಲ್ದಾರ್ ನಂದಕುಮಾರ್ ಬಣ್ಣಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಪಟ್ಟಣದ ಆಶಾ ಬಡಾವಣೆಯಲ್ಲಿರುವ ತಾಲೂಕು ಸಮಿತ ಸಮಾಜ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ ಕಾಲದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ ಇರಲಿಲ್ಲ. ಅಂತಹ ಸಂದರ್ಭದಲ್ಲೇ ಅಪ್ಪಣ್ಣ ಅವರ ಧರ್ಮ ಪತ್ನಿ ಲಿಂಗಮ್ಮ ಅವರಿಗೆ ವಚನ ಮಂಡಿಸುವ ಸ್ವಾತಂತ್ರೃವನ್ನು ಒದಗಿಸಿಕೊಡಲಾಗಿತ್ತು. ಇದು ಅಪ್ಪಣ್ಣ ಅವರ ವಿಶಾಲ ಮನೋಭಾವವನ್ನು ತೋರಿಸುತ್ತದೆ ಎಂದು ನುಡಿದರು.
ಶರಣರೆಲ್ಲ ಒಂದೆಡೆ ಸೇರಿ ನಡೆಸುತ್ತಿದ್ದ ಮಹಾ ಮನೆಯ ಸಭೆಯಲ್ಲಿ ಶರಣರು ವಾದಿಸಿದ ವಚನಗಳಿಗೆ ಅಂಕಿತ ಹಾಕುವ ಕಾರ್ಯ ಅಪ್ಪಣ್ಣ ಅವರದ್ದಾಗಿತ್ತು. ತದನಂತರವೇ ಆ ವಚನ ಪ್ರಚಲಿತಗೊಳ್ಳುತ್ತಿತ್ತು. ನಡೆ-ನುಡಿ, ಆಚಾರ-ವಿಚಾರ, ಲಿಂಗಪೂಜೆ, ಜಂಗಮ ದಾಸೋಹಗಳಂತಹ ಕಾರ್ಯಗಳನ್ನು ಮಾಡಿ ನುಡಿದಂತೆ ನಡೆದವರ ಸಾಲಿನಲ್ಲಿ ಅಪ್ಪಣ್ಣ ಅಗ್ರಗಣ್ಯರಾಗಿದ್ದಾರೆ. ಇಂತಹ ವಚನಕಾರರ ಆದರ್ಶ ಮುಂದಿನ ಜನಾಂಗಕ್ಕೆ ಪ್ರಚಲಿತವಾಗಿರಲಿ ಎಂದು ತಿಳಿಸಿದರು.
ಆಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ಅನಿಷ್ಟ, ಮೇಲು-ಕೀಳು, ಬಡವ, ಬಲ್ಲಿದನೆಂಬ ಭೇದ, ಭಾವ ಇದ್ದ ಅಂದಿನ ದಿನಗಳಲ್ಲಿ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿ ಸರ್ವರೂ ಸಮಾನರು ಎಂದು ಸಾರಿದವರು ಶರಣರು. ಅಂದು ನಡೆದ ಸಾಮಾಜಿಕ ಕ್ರಾಂತಿ ಇಂದು ವಿಶ್ವವೇ ಅನುಸರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಸಂವಿಧಾನ ಕೂಡಾ ಸಮಾಜದ ಸುಧಾರಣೆಗೆ ಬಂದಿದ್ದು, ಇದು ಕೂಡಾ ಶರಣರಿಂದ ಬಂದಿದ್ದು, ವಚನಗಳು ಜೀವನದ ಸಂವಿಧಾನವಾಗಿದೆ ಎಂದು ತಿಳಿಸಿದರು.
ಸಾಹಿತಿ ಪವನ್ ಮಾತನಾಡಿ, ಶರಣರು ಸಮ ಸಮಾಜ ಕಟ್ಟಲು ಶ್ರಮಿಸಿದವರು. ಅಂದಿನ ಅನುಭವ ಮಂಟಪ ಇಂದು ಸಂಸತ್ತು ಆಗಿದೆ. ವಚನ ಸಾಹಿತ್ಯದ ಅನುಭವ ಬದುಕಿನ ಜೀವನವಾಗಬೇಕು. ಸಮ ಸಮಾಜ ನಿರ್ಮಾಣಕ್ಕೆ ಅಂದಿನ ಅನುಭವ ಮಂಟಪದ ಉಸ್ತುವಾರಿ ವಹಿಸಿದ್ದವರು ಅಪ್ಪಣ್ಣ ಅವರಾಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ಉಪ ತಹಸೀಲ್ದಾರ್ ಪೂರ್ಣಿಮಾ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಸವಿತಾ ಸಮಾಜದ ಆಲೂರು ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಎಡಿಎಲ್ಆರ್ ಸೋಮಶೇಖರ್, ವೇಣುಗೋಪಾಲ್ ಇತರರು ಇದ್ದರು.