ಜಿಲ್ಲಾದ್ಯಂತ ಶಿವರಾತ್ರಿ ಹಬ್ಬದ ಸಂಭ್ರಮ: ದೇವಸ್ಥಾನದಲ್ಲಿ ವಿಶೇಷ ಪೂಜೆ

Shivratri festival celebration mandya
Published on

ಮಂಡ್ಯ: ಜಿಲ್ಲಾದ್ಯಂತ ಶುಕ್ರವಾರ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಅಂತೆಯೇ ಶಿವನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಹೋಮ, ಜಾಗರಣೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಸುಸೂತ್ರವಾಗಿ ನಡೆಯಿತು.

ಹಬ್ಬದ ಅಂಗವಾಗಿ ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಜಾಗರಣೆ ವೃತಾಚರಣೆ ಮಾಡಿದರು. ಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ಹರಿಕಥೆ, ಶಿವ ಪಾರಾಯಣ, ಜಪ-ತಪ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿಯಿಡೀ ಸಂಭ್ರಮದಿಂದ ನೆರವೇರಿದವು.

ನಗರದ ಗುತ್ತಲು ಬಡಾವಣೆಯ ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ 4.30ರಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆದವು. ಕ್ಷೀರ, ಮೊಸರು, ಎಳನೀರು, ಗಂಧ, ಜೇನುತುಪ್ಪ, ಸಕ್ಕರೆ, ನಿಂಬೆಹಣ್ಣು, ಪಂಚಾಮೃತಾಭಿಷೇಕ, ಅರಿಶಿನ ಕುಂಕುಮ, ಬಿಲ್ವಪತ್ರ ಅರ್ಚನೆ ಸೇರಿದಂತೆ ಶನಿವಾರ ಮುಂಜಾನೆವರೆಗೂ ಪೂಜೆ ನಡೆಯಿತು. ಪ್ರತೀ ಪೂಜೆಯ ಬಳಿಕ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿತ್ತು. ಭಕ್ತರ ದಂಡು ದೇವಾಲಯದತ್ತ ಹರಿದುಬಂದಿತ್ತು. ಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಧನ್ಯತಾ ಭಾವದಿಂದ ನಡೆಯುತ್ತಿದ್ದರು. ದೇವಾಲಯದಲ್ಲಿ ರಾತ್ರಿ ಪೂರ್ತಿ ಶಿವ ಪಾರಾಯಣ, ಭಜನಾ ಕಾರ್ಯಕ್ರಮ ನಡೆದವು.

ನಗರದ ಪುರಾಣ ಪ್ರಸಿದ್ಧ ಸಕಲೇಶ್ವರಸ್ವಾಮಿ ದೇವಾಲಯದಲ್ಲೂ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳ್ಳಿಯ ನಾಗಾಭರಣವನ್ನು ಧರಿಸಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಂಕರನಗರದಲ್ಲಿರುವ ಮಲೈ ಮಹದೇಶ್ವರಸ್ವಾಮಿ, ನಗರದ ಚಾಮುಂಡೇಶ್ವರಿನಗರದಲ್ಲಿರುವ ಶನೇಶ್ಚರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ದೇವಾಲಯವನ್ನು ನವೀಕರಿಸಲಾಗಿದ್ದು, ವಿಶೇಷ ಪೂಜಾ ಕೈಂಕರ್ಯ ಆಯೋಜಿಸಲಾಗಿತ್ತು. ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇನ್ನು ಜಿಲ್ಲೆಯ ಎಲ್ಲ ಶಿವಾಲಯಗಳಲ್ಲೂ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜೆ, ಭಜನೆ, ಹರಿಕಥೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲಿ 21 ಅಡಿ ರುದ್ರಾಕ್ಷಿ ಶಿವಲಿಂಗ ಸ್ಥಾಪಿಸಿದ್ದು, ಭಕ್ತರು ಭೇಟಿ ನೀಡಿ ಶಿವಲಿಂಗ ದರ್ಶನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net