ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರೆ ಇಂದಿನಿಂದ

7KMD-1
ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರ.
Published on

ಕೆ.ಎಂ.ದೊಡ್ಡಿ: ಶಿವರಾತ್ರಿ ಪ್ರಯುಕ್ತ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಮಾ.8ರಿಂದ 12ರವರೆಗೆ ಜಾತ್ರೆ ನಡೆಯಲಿದೆ.

ಮಾ.8ರಂದು ದೇವಾಲಯವನ್ನು ವಿಶೇಷವಾಗಿ ಅಲಂಕರಿಸಯವ ಮೂಲಕ ಜಾಗರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 5 ದಿನಗಳ ಕಾಲ ಜಾತ್ರೆ ಅದ್ದೂರಿಯಾಗಿ ನಡೆಯಲಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಮಹಾಶಿವರಾತ್ರಿ ದಿನದಂದು ಬೆಳಗ್ಗೆ 7ಕ್ಕೆ ಗಣಪತಿ ಪೂಜೆ, ಆತ್ಮಲಿಂಗೇಶ್ವರಸ್ವಾಮಿಗೆ ಪಂಚಾಮೃತಾಭಿಷೇಕ, ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30 ಮಹಾಮಂಗಳಾರತಿ ನೆರವೇರಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಾ.8ರಂದು ಬೆಳಗ್ಗೆ 6ರಿಂದ 8ರವರೆಗೆ ವಿಶೇಷ ಪೂಜಾ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, 2.15ಕ್ಕೆ ರಥೋತ್ಸವ ನಡೆಯಲಿದೆ. ಈ ವೇಳೆ ಕೆ.ಶೆಟ್ಟಹಳ್ಳಿ ಶ್ರೀ ಭೈರವೇಶ್ವರ ಸ್ವಾಮಿ, ಮಾರಮ್ಮ, ಬಿದರಹಳ್ಳಿಯ ಶ್ರೀ ಕಬ್ಬಾಳಮ್ಮ, ಮಾದರಹಳ್ಳಿಯ ಶ್ರೀ ದೇವಮ್ಮ ಮತ್ತು ಕಾಳಮ್ಮ, ಚಿಕ್ಕರಸಿನಕೆರೆಯ ಶ್ರೀ ಕಾಲಭೈರವೇಶ್ವರ, ಅರೇಚಾಕನಹಳ್ಳಿ ಶ್ರೀ ಶಂಭುಲಿಂಗೇಶ್ವರ, ಕರಡಕೆರೆಯ ಶ್ರೀ ಆಂಜನೇಯ ಸ್ವಾಮಿಯ ಬಿರುದುಗಳು ಮತ್ತು ವೀರಗಾಸೆ ಕುಣಿತ ನಡೆಯಲಿದೆ.

ರಾತ್ರಿ 10ರಿಂದ 12 ಗಂಟೆವರೆಗೆ ಹರಿಕಥೆ ಮತ್ತು ದೇವಿಪುರದ ಶ್ರೀ ರಾಮಾಂಜನೇಯ ಕಲಾ ಸಂಘದಿಂದ ದೊಣ್ಣೆವರಸೆ, ತಳಗವಾದಿಯ ಶ್ರೀ ಚೌಡೇಶ್ವರಿ ಕಲಾ ಸಂಘದಿಂದ ಕೋಲಾಟ, ಮುಟ್ಟನಹಳ್ಳಿ, ಕರಡಕರೆ, ಗೌಡಯ್ಯನದೊಡ್ಡಿ, ಮಣಿಗೆರೆ, ತಳಗವಾದಿ, ಪಾಂಡವಪುರ ಮತ್ತು ಮಂಡ್ಯದ ಹೊಸಹಳ್ಳಿ ಗ್ರಾಮದವರಿಂದ ಭಜನೆ ಏರ್ಪಡಿಸಲಾಗಿದೆ.

ಮಾ.11ರಂದು ತೆಪ್ಪೋತ್ಸವ ನಡೆಯಲಿದ್ದು, ಅಂದು ಸಂಜೆ 6.50 ರಿಂದ ರಾತ್ರಿ 8 ಗಂಟೆವರೆಗೆ ಶಯನೋತ್ಸವ, ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷ ಮಧು ಜಿ.ಮಾದೇಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net