ಎಂ.ಬೊಮ್ಮನಹಳ್ಳಿಯಲ್ಲಿ ಅದ್ದೂರಿ ಶಿವರಾತ್ರಿ ಆಚರಣೆ: ಶನೇಶ್ಚರ ದೇವಸ್ಥಾನಕ್ಕೆ ಸಹಸ್ರಾರೂ ಭಕ್ತರ ಭೇಟಿ

Shivratri celebration at M. Bommanahalli mandya
Published on

ಮಂಡ್ಯ: ತಾಲೂಕಿನ ಎಂ.ಬೊಮ್ಮನಹಳ್ಳಿ ಗ್ರಾಮದಲ್ಲಿ 31ನೇ ವರ್ಷದ ಮಹಾಶಿವರಾತ್ರಿ ಹಬ್ಬ ಹಾಗೂ ಶನೇಶ್ಚರ ಜಾತ್ರಾ ಮಹೋತ್ಸವ ಶುಕ್ರವಾರ ಮತ್ತು ಶನಿವಾರ ಅದ್ದೂರಿಯಾಗಿ ನಡೆಯಿತು. ಪ್ರತಿ ವರ್ಷದಂತೆ ಸಹಸ್ರಾರೂ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಕೈಂಕರ್ಯ ನೆರವೇರಿದವು.

ದುದ್ದ ಹೋಬಳಿ ಭಾಗದ ಪುರಾಣ ಪ್ರಸಿದ್ಧವಾದ ಶನೇಶ್ಚರಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆದವು. ಶುಕ್ರವಾರ ಕಳಸ ಸ್ಥಾಪನೆ, ಹೋಮ ಹವನ, ಹೂ ಹೊಂಬಾಳೆ, ಪೂರ್ಣಕುಂಭ ಪೂಜೆ ನೆರವೇರಿತು. ಅಂತೆಯೇ ಹರಕೆ ಹೊತ್ತ ಭಕ್ತರು ಬಾಯಿ ಬೀಗ ಹಾಕಿಸಿಕೊಂಡು ಗ್ರಾಮದಿಂದ ಹೊರಭಾಗದಿಂದ ದೇವಸ್ಥಾನದವರೆಗೆ ನಡೆದ ಸ್ವಾಮಿಯ ಉತ್ಸವದಲ್ಲಿ ಭಾಗವಗಹಿಸಿದ್ದರು. ಈ ವೇಳೆ ಹುಳ್ಳೇನಹಳ್ಳಿ ಮಂಜು ಹಾಗೂ ತಂಡದ ಪೂಜಾ ಕುಣಿತ ಉತ್ಸವದ ಮೆರಗು ಹೆಚ್ಚಿಸಿತು. ಶುಕ್ರವಾರ ಇಡೀ ರಾತ್ರಿ ದೇವಸ್ಥಾನದಲ್ಲಿ ಪೂಜೆ, ಭಜನೆ ನಡೆಯಿತಲ್ಲದೆ, ಭಕ್ತ ಸಮೂಹ ಜಾಗರಣೆ ಮಾಡಿದರು. ಮಾರಗೌಡನಹಳ್ಳಿ ತಂಡ ದೇವಸ್ಥಾನದ ಮುಂಭಾಗ ಶನೇಶ್ಚರ ದೇವರ ಕಥಾಮೃತ ಹರಿಕಥೆ ನಡೆಸಿಕೊಡಲಾಯಿತು.

ಶನಿವಾರ ಮುಂಜಾನೆ ಶನೇಶ್ಚರಸ್ವಾಮಿ, ಶಿವ ಹಾಗೂ ನಂದಿ ದೇವಾಲಯದಲ್ಲಿ ದೇವರಿಗೆ ಅಭಿಷೇಕ ನೆರವೇರಿಸಲಾಯಿತು. ಶನೇಶ್ಚರ ಸ್ವಾಮಿಗೆ ವಿವಿಧ ಬೆಳ್ಳಿಯ ಆಭರಣ ಸೇರಿದಂತೆ ಹಲವು ಬಗೆ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಇಡೀ ದೇವಾಲಯವನ್ನ ಹೂಗಳಿಂದ ಶೃಂಗರಿಸಲಾಗಿತ್ತು. ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರಿಗೆ ಅನ್ನ, ಸಾರು, ಪಾಯಸ, ಬೂಂದಿಯನ್ನು ಪ್ರಸಾದವಾಗಿ ನೀಡಲಾಯಿತು. ಸೌದೇನಹಳ್ಳಿ, ಬೊಮ್ಮನಹಳ್ಳಿ, ನಂದಹಳ್ಳಿ, ತಿರುಮಲಾಪುರ, ಹುನುಗನಹಳ್ಳಿ, ಹೊಸಹಳ್ಳಿ, ಸಿದ್ದೇಗೌಡನ ಕೊಪ್ಪಲು, ಪುರದಕೊಪ್ಪಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ 3000ಕ್ಕೂ ಹೆಚ್ಚು ಜನರು ದೇವರಿಗೆ ಪೂಜೆ ಸಲ್ಲಿಸಿ ಅನ್ನದಾಸೋಹದಲ್ಲಿ ಪಾಲ್ಗೊಂಡರು.

ಇನ್ನು ಮಾಡವೀರನಹಳ್ಳಿ ಗ್ರಾಮದ ಕಾಡುಬಸವೇಶ್ವರಸ್ವಾಮಿ ದೇವಾಲಯದಲ್ಲಿ ದೇವರಿಗೆ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಅನ್ನಪ್ರಸಾದ ನೀಡಲಾಯಿತು. ಬಿದರಕಟ್ಟೆ ಗ್ರಾಮದಲಿ ಪ್ರತಿ ವರ್ಷದಂತೆ ಈ ಬಾರಿಯೂ ಶನೇಶ್ಚರ ಹಾಗೂ ಶಿವ ದೇವಾಲಯಗಳಲ್ಲಿ ಪೂಜೆ ನಡೆಯಿತು. ಒಂದು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಬಸರಾಳು ಗ್ರಾಮದ ಸಾವಿರ ವರ್ಷಗಳ ಇತಿಹಾಸವಿರುವ ಮಲ್ಲಿಕಾರ್ಜುನಸ್ವಾಮಿ ಹಾಗೂ ನಂದಿ ಬಸವೇಶ್ವರ ಸ್ವಾಮಿ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿಯನ್ನು ಆಯೋಜಿಸಲಾಗಿತ್ತು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net