

ಬೆಂಗಳೂರು: ದೇಶಕ್ಕಾಗಿ ಹೋರಾಟ ಮಾಡಿದ ಐತಿಹಾಸಿಕ ವ್ಯಕ್ತಿಗಳನ್ನ ಯಾವುದೋ ಒಂದು ಜಾತಿಗೆ ಸೀಮಿತ ಮಾಡಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ ಮೊದಲ ಬಾರಿಗೆ ಬ್ರಿಟೀಷ ಅಧಿಕಾರಿ ಥ್ಯಾಕರೆಯನ್ನು ಹತ್ಯೆಗೈದು ಆಂಗ್ಲರಿಗೆ ಸೋಲಿನ ರುಚಿ ತೋರಿಸಿದ ಧೀರ ಮಹಿಳೆ. ಹೆಣ್ಣುಮಕ್ಕಳು ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಸೀಮಿತವಾಗಿದ್ದ ಆ ಕಾಲ ಘಟ್ಟದಲ್ಲಿ ಚನ್ನಮ್ಮ ರಣರಂಗಕ್ಕಿಳಿದು ಹೋರಾಟ ಮಾಡಿದ್ದಾರೆ. ಅವರೊಂದಿಗೆ ಸಂಗೊಳ್ಳಿ ರಾಯಣ್ಣ, ಒಡ್ಡರ ಎಲ್ಲಪ್ಪ ಎಂಬ ನಂಬಿಗಸ್ಥರು ಕೆಲಸ ಮಾಡಿದ್ದನ್ನು ಇತಿಹಾಸ ಹೇಳುತ್ತದೆ. ಸಿಂಹಾಸನ ಉಳಿಸಿಕೊಳ್ಳುವುದಕ್ಕಾಗಿ ಬ್ರಿಟೀಷರ ಜೊತೆ ಕೈಜೋಡಿಸದೇ ವೀರವನಿತೆಯಾಗಿ ಹೋರಾಡಿದ ಚನ್ನಮ್ಮನ್ನ ಕೆಚ್ಚು ಎಂತಾದ್ದು ಎಂಬುದನ್ನು ಯುವ ಜನಾಂಗಕ್ಕೆ ತಿಳಿಸುವ ಅಗತ್ಯವಿದೆ. ಚನ್ನಮ್ಮನ ಗೌರವಾರ್ಥ ಕಿತ್ತೂರು ಉತ್ಸವವನ್ನು ಸರ್ಕಾರ ಆಯೋಜಿಸಿದ್ದು, ಅ.25ಕ್ಕೆ ಸಮಾರೋಪಗೊಳ್ಳಲಿದೆ. ಇಂತಹ ಮಾದರಿ ವ್ಯಕ್ತಿಗಳನ್ನು ಜಾತಿ-ಜನಾಂಗಕ್ಕೆ ಸೀಮಿತ ಮಾಡಬಾರದು ಎಂದು ತಂಗಡಗಿ ಅಭಿಪ್ರಾಯಿಸಿದರು.
ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಕಾಶಪ್ಪನವರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಕನ್ನಡ ಸಂಸ್ಕೃತಿ ಇಲಾಖೆಯ ಬಲವಂತರಾವ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಮಹಾತ್ಮರ ಚರಿತ್ರೆ ಪಠ್ಯವಾಗಬೇಕು
ಕೇವಲ ಸ್ವಾರ್ಥಕ್ಕಾಗಿ ಬದುಕುವ ಸಂಕುಚಿತ ವ್ಯಕ್ತಿಗಳ ನಡುವೆ ಸಮಾಜಕ್ಕಾಗಿ, ದೇಶಕ್ಕಾಗಿ ಹೋರಾಡಿದ ಮಹಾತ್ಮರ ಚರಿತ್ರೆಗಳನ್ನು ಪಠ್ಯದಲ್ಲಿ ಅಳವಡಿಸಬೇಕು. ಎಂದೂ ಮರೆಯಲಾಗದ ಬಹಳಷ್ಟು ಮಹಿಳಾ ಸಾಧಕಿಯರು ಕನ್ನಡ ನಾಡಿನಲ್ಲಿ ಆಗಿ ಹೋಗಿದ್ದಾರೆ. ಕೆಳದಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಸಂಚಿ ಹೊನ್ನಮ್ಮ, ಕಿತ್ತೂರು ಚನ್ನಮ್ಮ ಇವರುಗಳ ಇತಿಹಾಸವನ್ನು ನಮ್ಮ ಯುವ ಪೀಳಿಗೆ ತಿಳಿದುಕೊಳ್ಳಬೇಕು ಎಂದು ಬೇಲಿಮಠದ ಡಾ.ಶಿವರುದ್ರ ಸ್ವಾಮೀಜಿ ಹೇಳಿದರು.