

ರಾಯಚೂರು: ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ರ ಜೀವನ ಇಂದಿನ ಯುವ ಪೀಳಿಗೆಗೆ ಪ್ರೇರಣಾದಾಯಕವಾಗಿದ್ದು, ಅವರು ನಡೆದು ಬಂದ ಹಾದಿ ಮತ್ತು ಸಾಧನೆ ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಪ್ರತಿಷ್ಠಾನದಿಂದ ಭಾನುವಾರ ಏರ್ಪಡಿಸಿದ್ದ ಶಿವಶ್ರೀ ಪ್ರಶಸ್ತಿ ಪ್ರದಾನ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಯಲ್ಲಿ ಹುಟ್ಟಿ ತಮ್ಮ ಅಪಾರವಾದ ಜ್ಞಾನಶಕ್ತಿಯಿಂದ ಸುಪ್ರೀಂ ಕೋರ್ಟ್ ನ್ಯಾಯಾೀಶರಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುವ ಮಟ್ಟಕ್ಕೆ ಶಿವರಾಜ ಪಾಟೀಲರು ಬೆಳೆದಿದ್ದು, ಅವರ ವ್ಯಕ್ತಿತ್ವ, ಸಮಾಜಕ್ಕಾಗಿ ಮಾಡುತ್ತಿರುವ ಸೇವೆ ಇತರರಿಗೆ ಮಾದರಿಯಾಗಿದೆ.
ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಆ ಮೂಲಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಅವರ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ರಾಜಾ ಅಮರೇಶ್ವರ ನಾಯಕ ಹೇಳಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಖ್ಯಾತ ಕ್ಲಾರಿಯೋನೆಟ್ ವಾದಕ ಪಂ.ನರಸಿಂಹಲು ವಡವಾಟಿಗೆ ಶಿವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಸೇವೆ ಸಲ್ಲಿಸಿದ ವೈದ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗಬ್ಬೂರಿನ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಶಿವರಾಜ ಪಾಟೀಲ್, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಪುರ, ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ, ಪ್ರತಿಷ್ಠಾನದ ಎಸ್.ಎಂ.ರೆಡ್ಡಿ, ಪ್ರೊ.ಚನ್ನಾರಡ್ಡಿ ಪಾಟೀಲ್ ಉಪಸ್ಥಿತರಿದ್ದರು.