

ಚಿಕ್ಕಬಳ್ಳಾಪುರ: ತಾಲೂಕಿನ ಐತಿಹಾಸಿಕ ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಕೈಗೊಂಡಿರುವ ಶಿವೋತ್ಸವ ಕಾರ್ಯಕ್ರಮದ ಸಿದ್ಧತೆಗಳನ್ನು ಸಚಿವ ಡಾ ಕೆ.ಸುಧಾಕರ್ ಶನಿವಾರ ಪರಿಶೀಲಿಸಿದರು.
ಜಿಲ್ಲೆಯು ಪ್ರವಾಸಿ ತಾಣ, ದೇವಾಲಯ, ಐತಿಹಾಸಿಕ ಸೇರಿ ಅನೇಕ ಆಕರ್ಷಕ ತಾಣಗಳನ್ನು ಹೊಂದಿದೆ. ಅದರಲ್ಲಿ ನಂದಿ ಬೆಟ್ಟ ಮತ್ತು ನಂದಿಯ ಭೋಗನಂದೀಶ್ವರಸ್ವಾಮಿ ದೇವಸ್ಥಾನವು ವೈಶಿಷ್ಟ$್ಯ ಹೊಂದಿದೆ. ಇದಕ್ಕೆ ಮೈಸೂರು ದಸರಾ ರೀತಿಯಲ್ಲೇ ಶಿವೋತ್ಸವ ನಡೆಸಲಾಗುತ್ತಿದೆ ಎಂದರು.
ಈಗಾಗಲೆ ಮಹಾಶಿವರಾತ್ರಿ ದಿನ ನಂದಿ ಕ್ಷೇತ್ರದಲ್ಲಿ ವಿಭಿನ್ನ ಮತ್ತು ವೈಭವದ ಶಿವೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ಜಿಲ್ಲಾಡಳಿತ ನೇತೃತ್ವ ವಹಿಸಲಿದ್ದು, ಮುಂದಿನ ವರ್ಷದಿಂದ ಸರ್ಕಾರವೇ ಅದ್ದೂರಿಯಾಗಿ ಆಚರಿಸಲಿದೆ ಎಂದರು. ರಾಜ್ಯದಲ್ಲಿ ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ದಸರಾ, ಹಂಪಿಯು ಹಂಪಿ ಉತ್ಸವ, ಬೆಂಗಳೂರು ಕರಗ ಉತ್ಸವಕ್ಕೆ ಜನಪ್ರಿಯತೆ ಹೊಂದಿದೆ. ಇದೇ ಮಾದರಿಯಲ್ಲಿ ಇಲ್ಲಿನ ಶಿವೋತ್ಸವ ಹೆಚ್ಚಿನ ಖ್ಯಾತಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭಾ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ, ಮುಖಂಡರಾದ ಕೆ.ವಿ.ನವೀನ್ ಕಿರಣ್, ಮರಳುಕುಂಟೆ ಕೃಷ್ಣಮೂರ್ತಿ, ಜಿ.ಆರ್.ಶ್ರೀನಿವಾಸ್, ಕೆ.ವಿ.ಮಂಜುನಾಥ್, ವೆಂಕಟನಾರಾಯಣಪ್ಪ, ನಂದಿ ಮುನಿಶಾಮಿ ಮತ್ತಿತರರು ಇದ್ದರು.
ಗಿರಿಧಾಮದಲ್ಲಿ ದೀಪಾಲಂಕಾರ
ಕಾರ್ಯಕ್ರಮದ ಅಂಗವಾಗಿ ನಂದಿ ಬೆಟ್ಟದಲ್ಲಿ ದೀಪಾಲಂಕಾರ, ಬೆಟ್ಟದಲ್ಲಿ ಲೇಸರ್ ಶೋ ಕೈಗೊಳ್ಳಲಿದೆ. ಶಿವೋತ್ಸವದಲ್ಲಿ ಸುಮಾರು 2 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. 20 ರಿಂದ 25 ಸಾವಿರ ಆಸನ, 3 ಸಾವಿರ ಫೋರ್ ವ್ಹೀಲರ್ ಪಾಕಿಂರ್ಗ್ ಮತ್ತು 5 ಸಾವಿರ ದ್ವಿಚಕ್ರ ವಾಹನಗಳ ಪಾಕಿರ್ಂಗ್, ಊಟದ ವ್ಯವಸ್ಥೆಗೆ 25 ರಿಂದ 30 ಕೌಂಟರ್ ತೆರೆಯಲಾಗುತ್ತಿದೆ. ದೇವಾಸ್ಥಾನದ ಆವರಣದಲ್ಲಿ 25 ರಿಂದ 40 ಮಳಿಗೆ ಸ್ಥಾಪಿಸಲಿದ್ದು ಸ್ಥಳಿಯ ವಸ್ತುಗಳ ಪ್ರದರ್ಶನ ನಡೆಯಲಿದೆ.
ರಾಜ್ಯಪಾಲರಿಂದ ಉದ್ಘಾಟನೆ
ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಾಂದ್ ಗೆಹಲೋತ್ ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿರಿಗೆರೆಯ ಸ್ವಾಮೀಜಿ, ಸತ್ಯ ಸಾಯಿ ಸಂಸ್ಥೆಯ ಮಧುಸೂದನ್ ಸಾಯಿ, ಅನೇಕ ಸಂತರು, ಗುರುಗಳು ಸೇರಿ ಅನೇಕರಿಗೆ ಆಹ್ವಾನ ನೀಡಲಾಗಿದೆ. ಮಾ.1ರ ಸಂಜೆ 6 ರಿಂದ ಆರಂಭವಾಗಿ ಬೆಳಗ್ಗೆ ರಥೋತ್ಸವದವರೆಗೂ ನಿರಂತರವಾಗಿ ಸಾಂಸತಿಕ, ಭಕ್ತಿ ಹಾಗೂ ಜಾಗರಣೆ ಕಾರ್ಯಕ್ರಮಗಳು ನಡೆಯಲಿವೆ. ರಾಷ್ಟ್ರೀಯ ಮಟ್ಟದ ಸಂಗೀತ ಮತ್ತು ನಾಟ್ಯ ಕಲಾವಿದರು. ಸಿನಿಮಾ ತಾರೆಯರು, 25 ಹೆಸರಾಂತ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ನಗೆ ಹಬ್ಬ ನಡೆಯಲಿದೆ.