

ವಿಜಯಪುರ : ಶಿವದಾಸ್ ಘೋಷ್‌ರ ಚಿಂತನೆಗಳಿಲ್ಲದೆ ನಮ್ಮ ದೇಶದಲ್ಲಿ ಇಂದು ಸಮಾಜವಾದ ಸ್ಥಾಪನೆ ಮಾಡಲು ಸಾಧ್ಯವಿಲ್ಲ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸೆಕ್ರೇಟರಿಯೇಟ್ ಸದಸ್ಯ ಡಾ. ಟಿ.ಎಸ್. ಸುನೀತಕುಮಾರ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಎಸ್‌ಯುಸಿಐ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಾನ್ ಮಾರ್ಕ್ಸ್‌ವಾದಿ ಚಿಂತಕ ಶಿವದಾಸ್ ಘೋಷ್‌ರ ಜನ್ಮ ಶತಮಾನೋತ್ಸವದಲ್ಲಿ ಅವರು ಮಾತನಾಡಿದರು.
ಮಾರ್ಕ್ಸ್‌ವಾದ ಕೇವಲ ರಾಜಕೀಯ ಸಿದ್ಧಾಂತವಲ್ಲ ಅದೊಂದು ಜೀವನ ವಿಧಾನವಾಗಿದೆ. ಇಂಥ ಮಾರ್ಕ್ಸ್‌ವಾದವನ್ನು ಇಂದು ದೇಶದ ಜನತೆ ಅಳವಡಿಕೊಳ್ಳಬೇಕು. ಜೊತೆಗೆ ಕಾರ್ಮಿಕ ವರ್ಗ ಸಂಸ್ಕೃತಿ ಬೆಳೆಸಿಕೊಂಡು ಶೋಷಿತರ ವಿಮುಕ್ತಿಗೆ ಕೆಲಸಮಾಡಲು ಇಂದಿನ ಜನತೆ ಮುಂಬರಬೇಕು ಎಂದರು.
ಲೆನಿನ್, ಸ್ಟಾಲಿನ್ ಮತ್ತು ಮಾವೋ ಜೆಡಾಂಗ್ ನಂತರ ಅಂತಾರಾಷ್ಟೀಯ ಮಟ್ಟದ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಶಿವದಾಸ್ ಘೋಷ್ ನೀಡಿದ ಕೊಡುಗೆ ಅನನ್ಯ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಮ್ಯುನಿಸ್ಟ್ ಚಳವಳಿಗಳು ಶಿವದಾಸ್ ಘೋಷ್‌ರ ಚಿಂತನೆಗಳಿಲ್ಲದೆ ಇಂದು ತಮ್ಮ ಗಮ್ಯವನ್ನು ಮುಟ್ಟಲು ಸಾಧ್ಯವಿಲ್ಲ ಎಂದರು.
ಜಗತ್ತಿನಾದ್ಯಂತ ಬಂಡವಾಳಶಾಹಿಗಳ ಕುತಂತ್ರದಿಂದಾಗಿ ಕಮ್ಯುನಿಸ್ಟ್ ಚಿಂತನೆಗೆ ಹಿನ್ನಡೆಯಾದಾಗ ಶಿವದಾಸ್ ಘೋಷ್ ಅವರು ಹೊಸ ಚಿಂತನೆಗಳನ್ನು ತುಂಬಿ ಮಾರ್ಕ್ಸ್‌ವಾದವನ್ನು ಮತ್ತೆ ಬಲಿಷ್ಟಗೊಳಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ ಮಾತನಾಡಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳ ಶಾಹಿ ವ್ಯವಸ್ಥೆಯು ತನ್ನ ಪಾತ್ರವನ್ನು ಮುಗಿಸಿದೆ. ನಮ್ಮ ದೇಶದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಸೇರಿದಂತೆ ಜಗತ್ತಿನೆಲ್ಲೆಡೆ ಆಳುವ ಸರ್ಕಾರಗಳು ಇಂದು ಜನ ಹೋರಾಟಗಳಿಂದ ಹೆದರಿದೆ. ಹಾಗಾಗಿ ಹೋರಾಟಗಳನ್ನು ಹತ್ತಿಕ್ಕಲು ಸರ್ಕಾರಗಳು ಫ್ಯಾಸಿವಾದಿ ಕ್ರಮವನ್ನು ಕೈಗೊಳ್ಳುತ್ತಿವೆ. ಆದಾಗ್ಯೂ ಇವರ ದುರಾಡಳಿತದ ವಿರುದ್ಧ ಜನತೆ ನಿರಂತರವಾಗಿ ಬೀದಿಗಿಳಿಯುತ್ತಿದ್ದಾರೆ. ಆದರೆ ಈ ಹೋರಾಟಗಳಿಗೆ ಸಂಘಟಿತ ಸ್ವರೂಪ ಮತ್ತು ಕ್ರಾಂತಿಕಾರಿ ಪಕ್ಷದ ನೇತೃತ್ವ ಸಿಗದ ಹೊರತು ಹೋರಾಟಗಳು ತಮ್ಮ ಗಮ್ಯಸ್ಥಾನವನ್ನು ಮುಟ್ಟಲು ಸಾಧ್ಯವಿಲ್ಲ ಎಂದರು.
ಸದಸ್ಯರಾದ ಮಲ್ಲಿಕಾರ್ಜುನ ಎಚ್.ಟಿ, ಸಿದ್ದಲಿಂಗ ಬಾಗೇವಾಡಿ, ಎಚ್.ಟಿ. ಭರತಕುಮಾರ ಉಪಸ್ಥಿತರಿದ್ದರು.