ವಚನಸಾಹಿತ್ಯ ಆಶಯ ಉಣಬಡಿಸಿದ ಶಿವಯೋಗಿ

27Athani1
Published on

ಅಥಣಿ: ವಚನಸಾಹಿತ್ಯದ ಆಶಯಗಳನ್ನು ಕನ್ನಡನಾಡಿಗೆ ಉಣಬಡಿಸಿದ ಸರ್ವಶ್ರೇಷ್ಠರು ಗಚ್ಚಿನಮಠದ ಮಹಾತಪಸ್ವಿ ಶ್ರೀಮುರುಘೆಂದ್ರ ಶಿವಯೋಗಿಗಳು. ಅವರ ದರ್ಶನಭಾಗ್ಯವನ್ನು ದೇಶದ ಎಲ್ಲ ನಾಯಕರು ಪಡೆದಿರುವುದು ಹಮ್ಮೆಯ ಸಂಗತಿ ಎಂದು ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಸಂಸ್ಥಾಪಕ ಶಶಿಕಾಂತ ಪಟ್ಟಣ ಹೇಳಿದರು.

ಪಟ್ಟಣದ ಸುಕ್ಷೇತ್ರ ಗಚ್ಚಿನಮಠದ ಲಿಂ.ಮುರುಘೆಂದ್ರ ಶಿವಯೋಗಿಗಳ 190ನೇ ಜಯಂತ್ಯುತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿ, ಹರ್ಡೆಕರ ಮಂಜಪ್ಪನವರಿಗೆ ಯಾರು ಲಿಂಗದೀಕ್ಷೆ ನೀಡದಿದ್ದ ಸಂದರ್ಭದಲ್ಲಿ ಅಥಣಿ ಶಿವಯೋಗಿಗಳು ಅವರಾಧಿ ಪಟ್ಟಾಧ್ಯಕ್ಷರಿಂದ ಲಿಂಗದೀಕ್ಷೆ ಕೊಡಿಸಿ ಹರ್ಡೆಕರ ಮಂಜಪ್ಪನವರಿಂದ ಗಾಂಧೀಜಿ ಅವರಿಗೆ ಬಸವಣ್ಣನವರ ವಚನ ಪರಿಚಯಿಸುವ ಕಾರ್ಯ ಮಾಡಿದರು. ಭೀಮಕವಿಯ ಬಸವ ಪುರಾಣ, ವಚನ ಸಾಹಿತ್ಯವನ್ನು ಮನೆಮನೆಗೆ ತಲುಪಿಸಿದ ಶಿವಯೋಗಿಗಳು ಶ್ರೀಮಠದ ಉಸ್ತುವಾರಿಯನ್ನು ಭಕ್ತವೃಂದದ ಸಿದ್ಧಲಿಂಗ ಅಪ್ಪಗಳಿಗೆ ನೇಮಿಸಿ ಅವರ ಜತೆಗೆ 19 ವರ್ಷ ಶರಣ ತತ್ತ್ವ ಪ್ರಸಾರ ಮಾಡಿರುವ ಇತಿಹಾಸ ಇದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಚನಸಾಹಿತ್ಯವನ್ನು ನಾಡಿಗೆ ಪ್ರಸರಿಸಿ ಅದರಂತೆ ನಡೆದ ಮಹಾಶಿವಯೊಗಿಗಳು ಶ್ರೀ ಸಿದ್ಧಾರೂಢರು, ಶಿರಡಿ ಸಾಯಿಬಾಬಾ ಅವರ ಸಮಕಾಲೀನರಾಗಿದ್ದರು. ಬಾಲಗಂಗಾಧರ ತಿಲಕ ಸೇರಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇಲ್ಲಿ ಬಂದು ಆಶೀರ್ವಾದ ಪಡೆದಿದ್ದಾರೆ ಎಂದರು. ಚಬನೂರಿನ ರಾಮಲಿಂಗಯ್ಯ ಸ್ವಾಮೀಜಿ,

ಕೊಡೆಕಲ್‌ದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಗಚ್ಚಿನಮಠ

ಶಿವಯೋಗದ ಮೇರುಶಿಖರ, ಎಲ್ಲ ಮಠಗಳ ತಾಯಿಬೇರು ಮತ್ತು ಗುರುಮಠವಾಗಿದೆ ಎಂದರು.

ಉಪನ್ಯಾಸಕಿ ಡಾ.ಪ್ರಿಯಂವದಾ ಹುಲಗಬಾಳಿ ರಚಿಸಿದ ಕನ್ನಡ ಸಾಹಿತ್ಯದಲ್ಲಿ ಅಕ್ಕಮಹಾದೇವಿ ಲೇಖ-ಪುನರ್ಲೇಖ ಗ್ರಂಥವನ್ನು ಪೂಜ್ಯರು, ಗಣ್ಯರು ಬಿಡುಗಡೆ ಮಾಡಿದರು. ಸುಮಂಗಲೆಯರು ಬಾಲಶಿವಯೋಗಿಯನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಶಾಸ್ತ್ರ ಕೈಗೊಂಡರು. ಬಸವಕಿರಣ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಮಡಿವಾಳ ಸ್ವಾಮೀಜಿ, ವೀರೇಶ್ವರ ದೇವರು, ಬಸವರಾಜ ದೇವರು, ವೈದ್ಯ ಡಾ. ರಾಮ ಕುಲಕರ್ಣಿ, ಬಿಜೆಪಿ ಮುಖಂಡ ಗಿರೀಶ ಬುಟಾಳೆ, ಶಿವಕುಮಾರ ಉಮರಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net