ಜಾತಿ, ಧರ್ಮ ಮೀರಿದ ವ್ಯಕ್ತಿತ್ವ: ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಬಣ್ಣನೆ

Shivayogi Siddarama Jayanti Mandya
Published on

ಮಂಡ್ಯ: ಹಿಂದೆಲ್ಲ ವೃತ್ತಿ ಆಧಾರದ ಮೇಲೆ ಸಮುದಾಯವನ್ನು ವಿಂಗಡಿಸಲಾಗುತ್ತಿತ್ತು. ಆದರೆ ಜಾತಿ, ಧರ್ಮಕ್ಕೂ ಮೀರಿದ ವ್ಯಕ್ತಿತ್ವ ಶಿವಯೋಗಿ ಸಿದ್ದರಾಮ ಹೊಂದಿದ್ದರು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಬಣ್ಣಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಿವಯೋಗಿ ಸಿದ್ದರಾಮ ಅವರು ಜನರ ಉದ್ಧಾರಕ್ಕಾಗಿ ಅನೇಕ ಕೆರೆಗಳನ್ನು ನಿರ್ಮಿಸಲು ಶ್ರಮಿಸಿದರು. ಮಹಾರಾಷ್ಟ್ರದ ಸೊಲ್ಲಾಪುರ ಪಟ್ಟಣದ ನಿರ್ಮಾತೃ ಎಂದರೆ ತಪ್ಪಾಗಲಾರದು. ಈಗಲೂ ಅವರು ನಿರ್ಮಿಸಿರುವ ಕೆಲವು ಕೆರೆಗಳು ಬತ್ತಿಲ್ಲ. ಒಟ್ಟಾರೆ ಸಮಾಜಕ್ಕೆ ಅವರ ಕೊಡುಗೆ ಅಪಾರ. ಇಂತಹ ಮಹಾನ್ ಚೇತನರ ಅದರ್ಶಗಳನ್ನು ಯುವ ಜನತೆ ಅನುಸರಿಸಬೇಕು. ಸಮಾಜದ ಏಳಿಗೆಗೆ ಶ್ರಮಿಸಿದ ವ್ಯಕ್ತಿತ್ವ ಅವರದು ಎಂದು ಹೇಳಿದರು.

ನಿವೃತ್ತ ಶಿಕ್ಷಣ ಅಧಿಕಾರಿ ಆರ್.ಮಹಾದೇವಪ್ಪ ಮಾತನಾಡಿ, ನೀರು ಸಿಗದ ನೆಲೆಯಾಗಿದ್ದ ಸೊಲ್ಲಾಪುರದಲ್ಲಿ ಕುಡಿಯುವ ನೀರು ಕಲ್ಪಿಸಲು ತಮ್ಮ ಅನುಯಾಯಿಗಳೊಂದಿಗೆ ಕೆರೆ ನಿರ್ಮಿಸಿ ಜನರಿಗಾಗಿ ಬದುಕಿದರು. ಅವರನ್ನು ಶಿವಶರಣ ದೈವಿಪುರುಷ ಅವರು ಎಂದರೆ ತಪ್ಪಾಗುವುದಿಲ್ಲ. ಶಿವಯೋಗಿ ಅವರನ್ನು ಕಾಯಕಯೋಗಿ ಎಂದು ಕರೆಯಲಾಗುತ್ತಿತ್ತು. ಕಾಯಕ ಮಾಡಿದರೆ ಸಿದ್ದರಾಮ ಅವರ ರೀತಿ ಕಾಯಕ ಮಾಡಬೇಕು. ಅವರ ಕೃತಿಗಳನ್ನು ಓದುವಂತೆ ನಾವು ಮಕ್ಕಳಲ್ಲಿ ಅರಿವನ್ನು ಮೂಡಿಸಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಮತ್ತು ವಿವಿಧ ಸಂಘ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net