

ಹಿರೇಕೆರೂರ: ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಸಾಧಿಸಿ ತೋರಿಸಿದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರು ತಮ್ಮ ನಡೆ ನುಡಿಗಳ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಅಬಲೂರು ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಹೇಮರಡ್ಡಿ ಮಲ್ಲಮ್ಮನ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದಾನ ಧರ್ಮ ಅಂತಃಕರಣ, ತ್ಯಾಗ ಮನೋಭಾವನೆ, ನಿಸ್ವಾರ್ಥ ಭಕ್ತಿಗೆ ಹೆಸರಾಗಿದ್ದ ಹೇಮರಡ್ಡಿ ಮಲ್ಲಮ್ಮ ಜೀವನವಿಡಿ ಕಷ್ಟ ಅನುಭವಿಸಿ ಬದುಕಿನಲ್ಲಿ ಸಾರ್ಥಕತೆ ಕಂಡ ಶಿವಶರಣೆಯಾಗಿದ್ದಾರೆ. ಸಂಸಾರದ ಸಂಕಷ್ಟಗಳನ್ನು ಮೀರಿ ಸಮಾಜದ ಒಳಿತಿಗಾಗಿ ತನ್ನ ಬದುಕನ್ನು ಮೀಸಲಿಟ್ಟ ಹೇಮರಡ್ಡಿ ಮಲ್ಲಮ್ಮನವರು ಹಾಕಿ ಕೊಟ್ಟ ಮಾರ್ಗದಲ್ಲಿ ಇಂದಿನ ಪೀಳಿಗೆ ಸಾಗುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಗ್ರಾಮದ ಸೋಮೇಶ್ವರ ದೇವಸ್ಥಾನದಿಂದ ರಥಬೀದಿಯ ಮೂಲಕ ಬಸವೇಶ್ವರ ದೇವಸ್ಥಾನದವರೆಗೆ ಆರತಿ ಹಾಗೂ ವಾದ್ಯದೊಂದಿಗೆ ಮಲ್ಲಮ್ಮನ ಭಾವಚಿತ್ರದ ಮೆರವಣಿಗೆ ಭಕ್ತಿ ಭಾವದೊಂದಿಗೆ ನೆರವೇರಿತು. ನಂತರ ಅನ್ನ ಸಂತರ್ಪಣೆ ನಡೆಯಿತು.
ತಾಪಂ ಮಾಜಿ ಅಧ್ಯಕ್ಷ ಹೇಮಣ್ಣ ಮುದರಡ್ಡೇರ, ಮಲ್ಲೇಶಪ್ಪ ಕಚವೇರ, ಮಹಾಲಿಂಗಪ್ಪ ಗುಳಲಕಾಯಿ, ಬಸವರಾಜ ಮಳವಳ್ಳಿ, ಶಂಕ್ರಪ್ಪ ಗೌಡ್ರ, ಬಸವರಡ್ಡಿ ರಡ್ಡೇರ, ಸುರೇಶ ಕುರುವತ್ತೇರ, ಕರಬಸಪ್ಪ ಸಂಕ್ಲಾಪುರ, ಕೆಂಪರೆಡ್ಡಿ ರಡ್ಡೇರ, ಬಸಪ್ಪ ರಡ್ಡೇರ, ಸಿದ್ದಪ್ಪ ಕಚವೇರ, ಪ್ರಕಾಶ ರಡ್ಡೇರ, ಅರವಿಂದ ಹಾವೇರಿ, ಈರಪ್ಪ ಗುಳಲಕಾಯಿ, ಪ್ರವೀಣ ರಡ್ಡೇರ, ಪಾಲಾಕ್ಷಪ್ಪ ಗುಳಲಕಾಯಿ, ಯಲ್ಲಪ್ಪ ರಡ್ಡೇರ, ಸೋಮರಡ್ಡಿ ಅಡಗಂಟಿ, ಶೇಕಪ್ಪ ಕಚವೇರ, ಶಶಿಧರ ಸಂಕ್ಲಾಪುರ ಸೇರಿದಂತೆ ಸಮಾಜದ ಮುಖಂಡರು, ಗ್ರಾಮಸ್ಥರು ಇದ್ದರು.