ಪಾಲಿಕೊಪ್ಪದ ಶ್ರೀ ಶಿವಶಕ್ತಿಧಾಮದಲ್ಲಿ ಭಕ್ತಿ ಸಂಭ್ರಮ,  ಪ್ರಥಮ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತಸಮೂಹ,  ವಿವಿಧ ಧಾರ್ಮಿಕ ಕಾರ್ಯಕ್ರಮ,  ಅನ್ನಸಂತರ್ಪಣೆ

IMG-20250210-WA0014-1.jpg
Published on

ಹುಬ್ಬಳ್ಳಿ: ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಪಾಲಿಕೊಪ್ಪದ ಶ್ರೀ ಶಿವಶಕ್ತಿಧಾಮದ ಪ್ರಥಮ ವಾರ್ಷಿಕೋತ್ಸವವು ಸೋಮವಾರ ಭಕ್ತಸಮೂಹದ ಮಧ್ಯೆ ಸಂಭ್ರಮ, ಸಡಗರದಿಂದ ನಡೆಯಿತು.

ಶೃಂಗೇರಿ ಜಗದ್ಗುರು ಶಂಕಾರಾಚಾರ್ಯ ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳ ಕೃಪಾಶೀರ್ವಾದ ಹಾಗೂ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.

ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಪೂಜಾ ವಿಧಿ- ವಿಧಾನಗಳು ಶೃಂಗೇರಿ ಪೀಠದ ಅರ್ಚಕರು, ಆಚಾರ್ಯರ ನೇತೃತ್ವದಲ್ಲಿ ನಡೆದವು. ಪ್ರಧಾನ ದೈವವಾಗಿರುವ ಶ್ರೀ ಆನಂದೇಶ್ವರ ಶಿವಲಿಂಗಕ್ಕೆ ಏಕವಾರ ರುದ್ರಾಭಿಷೇಕ, ಶನೈಶ್ಚರ ಸ್ವಾಮಿಗೆ ತೈಲಾಭಿಷೇಕ ಹಾಗೂ ಇತರ ಎಲ್ಲ ದೇವರಿಗೆ ಪಂಚಾಮೃತ ಅಭಿಷೇಕಗಳು ಸಾಂಗವಾಗಿ ನೆರವೇರಿದವು ಎಂದು ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ ಭಟ್ಟ ಅವರು ತಿಳಿಸಿದರು.

ರುದ್ರಹೋಮ, ನವಗ್ರಹ ಹೋಮ, ಗಣಪತಿ ಹೋಮಗಳು, ಪೂರ್ಣಾಹುತಿ ಜರುಗಿದವು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಬೆಳಗ್ಗೆಯಿಂದ ನಡೆದ ಧಾರ್ಮಿಕ ಕೈಂಕರ್ಯ ಹಾಗೂ ಸೇವಾ ಕಾರ್ಯಗಳಲ್ಲಿ ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಶ್ರೀಮತಿ ಲಲಿತಾ ಸಂಕೇಶ್ವರ ಅವರು ಪಾಲ್ಗೊಂಡರು. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ತಮಿಳುನಾಡಿನ ಖ್ಯಾತ ಕಲಾವಿದ ಡಾ. ಶ್ಯಾಮಸುಂದರ್ ಭಾಗವತ ಮತ್ತು ತಂಡದವರು ರಾಧಾ ಕಲ್ಯಾಣ ಭಜನ್ ಕಾರ್ಯಕ್ರಮ ನಡೆಸಿಕೊಟ್ಟರು.

ವಾರ್ಷಿಕೋತ್ಸವ ಸಂಭ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಬೆಳಗ್ಗೆಯಿಂದ ಇಡೀ ದಿನ ದೇವಸ್ಥಾನದಲ್ಲಿ ಭಕ್ತರು ಸೇವಾ ಕಾರ್ಯದಲ್ಲಿ ತೊಡಗಿದ್ದರು ಎಂದು ಶ್ರೀಕ್ಷೇತ್ರದ ವ್ಯವಸ್ಥಾಪಕ ಆರ್. ರಾಮಚಂದ್ರನ್ ತಿಳಿಸಿದರು.

ಹಿಂದು ಸಂಸ್ಕೃತಿಯ ಪ್ರಸಾರಕ್ಕಾಗಿ ವಿ ಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ಪಾಲಿಕೊಪ್ಪದ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಶ್ರೀಶಿವಶಕ್ತಿ ಧಾಮವನ್ನು ಧಾರ್ಮಿಕ ನಿರ್ವಹಣೆಗಾಗಿ ಶೃಂಗೇರಿ ಶಾರದಾ ಪೀಠಕ್ಕೆ ವಹಿಸಿಕೊಟ್ಟಿರುವರು. 2024ರ ಮಾಘ ಮಾಸದ ಶುಕ್ಲಪಕ್ಷದ ತ್ರಯೋದಶಿಯಂದು ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಅವರ ಅಮೃತ ಹಸ್ತದಿಂದ ಪ್ರತಿಷ್ಠಾಪನೆಗೊಂಡು ಇದೀಗ ಒಂದು ವರ್ಷ ಪೂರ್ಣಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net