

ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಬಹುದಿನಗಳ ಸಂಕಲ್ಪ ಸಾಕಾರಗೊಂಡಿದ್ದು, ಶ್ರೀ ಶಿವಶಕ್ತಿ ಧಾಮದ ಲೋಕಾರ್ಪಣೆಯು ಗುರುವಾರ ವಿಧ್ಯುಕ್ತವಾಗಿ ನೆರವೇರಿತು. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಶಿವಶಕ್ತಿಧಾಮವನ್ನು ಉದ್ಘಾಟಿಸಿದರು.
ಹಿಂದು ಸಂಸ್ಕೃತಿಯ ಪ್ರಚಾರ ಮತ್ತು ಐಕ್ಯತೆ ದೃಷ್ಟಿಯಿಂದ ಹುಬ್ಬಳ್ಳಿ ಸಮೀಪದ ಪಾಲಿಕೊಪ್ಪದಲ್ಲಿ ನಿರ್ವಿುಸಲಾಗಿರುವ ದೇವಾಲಯಗಳ ಸಮುಚ್ಛಯಕ್ಕೆ ‘ಶ್ರೀ ಶಿವಶಕ್ತಿ ಧಾಮ’ ಎಂದು ನಾಮಕರಣ ಮಾಡಿದ ಶೃಂಗೇರಿ ಜಗದ್ಗುರುಗಳು, ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿವಲಿಂಗಕ್ಕೆ ‘ಆನಂದೇಶ್ವರ’, ಚಂಡಿಕೇಶ್ವರಿ ಮಾತೆಗೆ ‘ಜ್ಞಾನಾಂಬಿಕೆ’, ವಿನಾಯಕನಿಗೆ ‘ವಿಜಯ ಗಣಪತಿ’ ಎಂದು ನಾಮಕರಣ ಮಾಡಿದ್ದಾರೆ. ಜತೆಗೆ ಆದಿತ್ಯಾದಿ ನವಗ್ರಹಗಳು, ಶನೈಶ್ಚರ ಸ್ವಾಮಿ ಮತ್ತು ಕ್ಷೇತ್ರಪಾಲಕ ಕಾಲಭೈರವೇಶ್ವರನ ಮೂರ್ತಿಗಳನ್ನು ಮಾಘ ಶುದ್ಧ ತ್ರಯೋದಶಿಯ ರಾಜಯೋಗದ ಸುಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿ, ಸ್ವತಃ ಜಗದ್ಗುರುಗಳು ಕುಂಭಾಭಿಷೇಕ ಸಹಿತ ಬ್ರಹ್ಮಕಳಸಾರೋಹಣ ಮಾಡಿದರು.
ಬುಧವಾರ ಸಂಜೆಯೇ ಪಾಲಿಕೊಪ್ಪ ಕ್ಷೇತ್ರಕ್ಕೆ ಆಗಮಿಸಿದ ಶೃಂಗೇರಿ ಜಗದ್ಗುರುಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ದೇವಾಲಯದ ಪೂರ್ಣ ಪರಿಸರವನ್ನು ನೋಡಿದ ಶ್ರೀಗಳು ಇದೊಂದು ದೊಡ್ಡ ಕ್ಷೇತ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಾಣಪ್ರತಿಷ್ಠಾಪನೆ: ಶೃಂಗೇರಿ ಪೀಠದ 100ಕ್ಕೂ ಹೆಚ್ಚು ಋತ್ವಿಜರ ತಂಡವು ಕಳೆದೆರಡು ದಿನಗಳಿಂದ ಧಾರ್ವಿುಕ ಕಾರ್ಯಕ್ರಮದ ವೈದಿಕತ್ವವನ್ನು ವಹಿಸಿ, ಸ್ಥಳಶುದ್ಧಿ, ನಾಂದಿಪೂಜೆಯಿಂದ ಆರಂಭಿಸಿ ವಿವಿಧ ಹೋಮ-ಹವನ ಹಾಗೂ ಗುರುಪಾದುಕಾ ಪೂಜೆಯೊಂದಿಗೆ ಅಷ್ಟಬಂಧ ಪ್ರಾಣಪ್ರತಿಷ್ಠಾಪನೆಯನ್ನು ನೆರವೇರಿಸಿತು.
ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭವಾದ ಧಾರ್ವಿುಕ ವಿಧಿವಿಧಾನಗಳು ಅಂತಿಮವಾಗಿ ಜಗದ್ಗುರುಗಳ ಅಮೃತ ಹಸ್ತದಿಂದ ಬ್ರಹ್ಮಕಲಶತೀರ್ಥದ ಅಭಿಷೇಕ ಹಾಗೂ ಮಹಾಪೂಜೆಯೊಂದಿಗೆ ಸಂಪನ್ನಗೊಂಡವು. ಬೃಹತ್ ಗರ್ಭಗೋಪುರ ಮತ್ತು ರಾಜಗೋಪುರದ ಮೇಲೆ ಪ್ರತಿಷ್ಠಾಪಿಸಲಾಗಿರುವ ಪಂಚಕಲಶಗಳಿಗೆ ಸ್ವತಃ ಜಗದ್ಗುರುಗಳು ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ಶ್ರೀಮತಿ ವಾಣಿ ಆನಂದ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್ ಎಂ.ಡಿ. ಶಿವಾ ಸಂಕೇಶ್ವರ ಹಾಗೂ ಸಂಕೇಶ್ವರ ಕುಟುಂಬದ ಎಲ್ಲ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು. ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಬಿಜೆಪಿ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಶೃಂಗೇರಿ ಪೀಠದ ಆಡಳಿತಾಧಿಕಾರಿ ಪಿ.ಎ. ಮುರುಳಿ, ಆಡಳಿತ ಸಲಹೆಗಾರರಾದ ಡಾ. ಗೌರಿಶಂಕರ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ-ಧಾರವಾಡ ಸೇರಿ ಹಲವು ಕಡೆಗಳ ಲಕ್ಷಾಂತರ ಜನರಿಂದ ದೇವಾಲಯದ ಪ್ರಾರಂಭೋತ್ಸವಕ್ಕೆ ಆಗಮಿಸಬೇಕೆಂಬ ಅಪೇಕ್ಷೆ ವ್ಯಕ್ತವಾದರೂ, ಧಾರ್ವಿುಕ ಕಾರ್ಯಕ್ರಮದ ರೀತಿ-ನೀತಿ, ಪದ್ಧತಿಗಳಿಗೆ ಯಾವುದೇ ಅಡಚಣೆ ಆಗಬಾರದೆಂಬ ಕಾರಣಕ್ಕೆ ಸಾರ್ವಜನಿಕರಿಗೆ ಆಹ್ವಾನ ನೀಡಿರಲಿಲ್ಲ.
ಶ್ರೀ ಶಿವಶಕ್ತಿ ಧಾಮದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ಶ್ರೀಮತಿ ವಾಣಿ ಸಂಕೇಶ್ವರ ದಂಪತಿಯನ್ನು ಶೃಂಗೇರಿ ಮಠದ ಶ್ರೀ ವಿಧುಶೇಖರ ಭಾರತೀ ಜಗದ್ಗುರುಗಳು ಗುರುವಾರ ಶೃಂಗೇರಿ ಶಾರದಾ ಮಾತೆಯ ಮೂರ್ತಿ ನೀಡಿ ಸನ್ಮಾನಿಸಿದರು.
ಡಾ. ಆನಂದ ಸಂಕೇಶ್ವರ ಅವರು ತಿಳಿಸಿದರು. ನಾವು ಶಿವನ ಭಕ್ತರು. ಶಿವಾ ದೇವಾಲಯ ನಿರ್ವಿುಸಬೇಕೆಂದು ಸಂಕಲ್ಪ ಮಾಡಿದ್ದೆವು. ಅದೀಗ ಸಾಕಾರಗೊಂಡಿದೆ. ಶಿವಶಕ್ತಿ ಧಾಮದಲ್ಲಿ ಆನಂದೇಶ್ವರ, ಜ್ಞಾನಾಂಬಿಕೆ, ವಿಜಯ ಗಣಪತಿ, ಶನೈಶ್ಚರ ಸೇರಿ ವಿವಿಧ ಮೂರ್ತಿಗಳಿವೆ. ಮುರುಡೇಶ್ವರ ದೇವಸ್ಥಾನ ನಿರ್ವಿುಸಿದವರನ್ನು ಕರೆಯಿಸಿ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಪುಷ್ಕರಣಿ, ಹೊರ ಸಭಾಗೃಹ, ಅತಿಥಿಗೃಹ, ರಥಬೀದಿ ಹೀಗೆ ವಿಶೇಷ ಕಟ್ಟಡಗಳು ಇಲ್ಲಿವೆ. ಶೃಂಗೇರಿ ಮಠವು ಇದರ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡಿದೆ ಎಂದರು.
ಶೃಂಗೇರಿ ಮಠಕ್ಕೆ ಹಸ್ತಾಂತರ
ಶಿವಶಕ್ತಿ ಧಾಮವನ್ನು ಆರಾಧನಾ ಟ್ರಸ್ಟ್ನೊಂದಿಗೆ ಇಂದಿನಿಂದ ಜಗತ್ಪ್ರಸಿದ್ಧ ಶೃಂಗೇರಿ ಶಾರದಾ ಪೀಠದ ಸುಪರ್ದಿಗೆ ಹಸ್ತಾಂತರ ಮಾಡುತ್ತಿದ್ದೇವೆ ಎಂದು ಡಾ. ವಿಜಯ ಸಂಕೇಶ್ವರ ಅವರು ಘೋಷಣೆ ಮಾಡಿದರು. ಆರಾಧನಾ ಟ್ರಸ್ಟ್ ಆಡಳಿತ ಮಂಡಳಿಯ ಸದಸ್ಯರು, ನಮ್ಮ ಎಲ್ಲ ಸಂಬಂಧಿಕರು ಮನಃಪೂರ್ವಕವಾಗಿ ಶೃಂಗೇರಿ ಮಠಕ್ಕೆ ಈ ತೀರ್ಥ ಕ್ಷೇತ್ರವನ್ನು ಹಸ್ತಾಂತರ ಮಾಡಲು ಒಪ್ಪಿದ್ದೇವೆ ಎಂದು ಹೇಳಿದರು.