ಪ್ರಾಮಾಣಿಕ, ಧೈರ್ಯದಿಂದ ಸಂಸ್ಥೆ ಪ್ರಗತಿ

2412 KLB 01
Published on

ಕಲಬುರಗಿ: ಸಹಕಾರಿ ಸಂಸ್ಥೆಯ ಸಿಬ್ಬಂದಿ, ಆಡಳಿತ ಮಂಡಳಿ, ಶೇರುದಾರರು ಬೆಳವಣಿಗೆ ಪ್ರಾಮಾಣಿಕತೆ, ಧೈರ್ಯದಿಂದ ಮಾತ್ರ ಸಂಸ್ಥೆ ಪ್ರಗತಿ ಸಾಧಿಸುತ್ತದೆ. ಸಂಸ್ಥೆಯ ಬಗ್ಗೆ ಸಮಾಜದಲ್ಲಿ ವಿಶ್ವಾಸ ಇರಬೇಕು. ಅದರಂತೆ ಸಂಸ್ಥೆ ನಡೆದುಕೊಳ್ಳಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಸಹಕಾರಿ ಬ್ಯಾಂಕ್‌ನ ೨೫ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಮಾತನಾಡಿ, ಅನ್ನ ನೀಡುವ ಸಂಸ್ಥೆಗೆ ಅನ್ಯಾಯ ಮಾಡಬಾರದು. ರಾಜಕಾರಣಿ, ವಕೀಲರಿಗೆ ಯಾರೂ ಸಾಲ ಕೊಡಲ್ಲ. ಆದರೆ ನಾನು ವಿಶ್ವಾಸ ಮೂಡಿಸಿದ್ದರಿಂದ ಸಿದ್ಧರಿಸಿ ಸಂಸ್ಥೆ ಬೆಳೆದು ನಿಂತ್ತಿದೆ. ಹೀಗೆ ಎಲ್ಲ ಸಂಸ್ಥೆಗಳು ಜನರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಚಿಂತನೆ ಮಾಡಬೇಕು. ಧೈರ್ಯ ಮಾಡಬೇಕು. ಆಗಲೇ ಸಂಸ್ಥೆ ಬೆಳೆಯುತ್ತದೆ. ಲೆಕ್ಕ ಶುದ್ಧ ಇರಬೇಕು. ರಾಜಕಾರಣಿಗಳು ದುಬೈ, ಮಸ್ಕತ್‌ನಲ್ಲಿ ಆಸ್ತಿ ಮಾಡುವುದಕ್ಕಿಂತ ನಮ್ಮ ಭಾಗದಲ್ಲೇ ಉದ್ಯಮಗಳನ್ನು ಆರಂಭಿಸಿದರೆ, ನಮ್ಮ ಜನರಿಗೆ ಲಾಭ ದೊರೆಯುತ್ತದೆ ಎಂದರು.

ಮರಾಠರು, ಕ್ಷತ್ರೀಯ ಸಮಾಜದಿಂದ ಹಿಂದುತ್ವ ಬಲಿಷ್ಠವಾಗಿ ಉಳಿದಿದೆ. ಮರಾಠ ಅಭಿವೃದ್ಧಿ ಮಂಡಳಿಗೆ ವಿಧಾನಸೌಧದಲ್ಲಿ ಧ್ವನಿ ಎತ್ತಬೇಕಾಯಿತು. ಮರಾಠಿ ಭಾಷೆ, ಮರಾಠ ಸಮಾಜ. ಎರಡರಲ್ಲೂ ವ್ಯತ್ಯಾಸವಿದೆ. ಶಿವಾಜಿ ಮಹಾರಾಜರು ಇಲ್ಲದಿದ್ದರೆ ಬಸನಗೌಡ ಪಾಟೀಲ್ ಬಶೀರ್ ಅಹ್ಮದ್ ಆಗಿರಬೇಕಾಗಿರುತ್ತಿತ್ತು ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಮಾತನಾಡಿ, ದೇಶಕ್ಕೆ ಮರಾಠ ಸಮಾಜದ ಕೊಡುಗೆ ಅಪಾರವಾಗಿದೆ. ಪ್ರೀತಿ ವಿಶ್ವಾಸ ನಂಬಿಕೆಗಳು ಶಾಶ್ವತವಾಗಿ ಉಳಿಯುತ್ತವೆ. ನಮ್ಮ ಆಸ್ತಿ, ಅಂತಸ್ತು, ಗಾಡಿ ಯಾವುದೂ ಶಾಶ್ವತವಲ್ಲ. ನಮಗೆ ನೀಡಿರುವ ಜವಾಬ್ದಾರಿಯನ್ನು ನಿಯತ್ತು ನಿಷ್ಠೆಯಿಂದ ಮಾಡಬೇಕು. ಕೆಕೆಆರ್‌ಡಿಬಿಯಲ್ಲಿ ಅನುದಾನದಲ್ಲಿ ಆರೋಗ್ಯ, ಅಕ್ಷರ, ಉದ್ಯೋಗ, ಅರಣ್ಯ ಆವಿಷ್ಕಾರದ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು

ದೊಡ್ಡ ಬ್ಯಾಂಕ್ ಮಾಡಲು ಎಲ್ಲರ ಸಹಕಾರ ದೊರೆಯುತ್ತಿದೆ. ನಮ್ಮ ಸರ್ಕಾರದಿಂದ ಮರಾಠರಿಗೆ ಮಂತ್ರಿ ಸ್ಥಾನ ದೊರಕಿದೆ. ಮರಾಠ ಸಮಾಜದ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ಸದಾ ಸಹಕಾರ ಇರುತ್ತದೆ. ನಮ್ಮ ತಂದೆ ಉದ್ಘಾಟಿಸಿದ ಸಂಸ್ಥೆಯ ವೇದಿಕೆಯಲ್ಲಿ ನಾನು ಮಾತನಾಡುತ್ತಿರುವುದು, ನಂಬಿಕೆ, ಪ್ರೀತಿ ವಿಶ್ವಾಸಕ್ಕೆ ಸಾಕ್ಷಿ ಎಂದರು.

ಸಚಿವ ಶರಣಬಸಪ್ಪ ದರ್ಶನಾಪುರ, ಬ್ಯಾಂಕ್ ಅಧ್ಯಕ್ಷ ಡಾ.ದಿನಕರ ಮೋರೆ, ಉಪಾಧ್ಯಕ್ಷ ಸೂರ್ಯಕಾಂತ ಕದಮ, ಪ್ರಮುಖರಾದ ಅನೀಲ ಮೋರೆ, ಶ್ರೀರಾಮ ಪವಾರ, ರವಿರಾಜ ಮೋರೆ, ಆರ್.ಬಿ.ಜಗದಾಳೆ, ಬ್ರಹ್ಮಾನಂದ ಪಡವಾಳಕರ್, ಮಾಣಿಕ್ ಶಿಂಧೆ, ಜ್ಯೋತಿ ಭೀಸೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net