

ಹೊಳೆನರಸೀಪುರ: ಪಟ್ಟಣದ ರಥ ಬೀದಿಯಲ್ಲಿರುವ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಶಾಖಾ ಮಠದ ಆವರಣದಲ್ಲಿರುವ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಗಣೇಶ ಪೂಜೆ, ಪುಣ್ಯಾಹವಾಚನ, ಧ್ವಜಾರೋಹಣ ಮತ್ತು ಇತ್ಯಾದಿ ಪೂಜಾ ಕಾರ್ಯಗಳು ಜರುಗಿದವು.
ಕೆ.ಆರ್.ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶಂಕರ ಭಾರತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ರಾತ್ರಿ ರಾಕ್ಷೋಘ್ನ ಹೋಮ, ಕಳಶ ಸ್ಥಾಪನಾದಿಗಳು, ಬಲಿ ಉತ್ಸವ, ಗಿರಿಜಾ ಕಲ್ಯಾಣೋತ್ಸವ, ಪಂಚಾಮೃತಾಭಿಷೇಕ, ರುದ್ರಾಭಿಷೇಕ ಸಹಿತ ವಿಶೇಷ ಪೂಜೆಗಳು ಜರುಗಿದವು
ರಥೋತ್ಸವ: ಶನಿವಾರ ಬೆಳಗ್ಗೆ ರಥಾಧಿವಾಸ, ಕಲಶಸ್ಥಾಪನೆ, ರಥಶುದ್ಧಿ, ರಥಾರೋಹಣ ಹಾಗೂ ರಥೋತ್ಸವ ನಡೆಸಲಾಯಿತು. ರಥೋತ್ಸವ ಮೆರವಣಿಗೆಯಲ್ಲಿ ಸೌಂದರ್ಯ ಲಹರಿ ಭಜನಾ ಮಂಡಳಿ ಸದಸ್ಯರು ಹಾಗೂ ಸುಮಂಗಲಿಯರು ಸೌಂದರ್ಯಲಹರಿ, ಶಿವಾನಂದಲಹರಿ, ಲಲಿತ ಸಹಸ್ರನಾಮ ಮುಂತಾದ ಸ್ತೋತ್ರಗಳನ್ನು ಪಾರಾಯಣ ಮಾಡುತ್ತ ಸಾಗಿದರು. ರಥೋತ್ಸವದ ನಂತರ ದೇವಾಲಯದಲ್ಲಿ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.