ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತ್ಯುತ್ಸವ

19 HANUR 3
ಅಜ್ಜೀಪುರ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಆಚರಿಸಲಾಯಿತು. ಶ್ರೀ ನಂದೀಶ ಶಿವಾಚಾರ್ಯ ಸ್ವಾಮೀಜಿ, ಮುರುಡೇಶ್ವರ ಸ್ವಾಮಿ, ಶಿವಕುಮಾರ್, ಜಯಪ್ಪ ಇತರರು ಇದ್ದರು.
Published on

ಹನೂರು: ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ಸ್ಥಾಪಿಸಿದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಬಡ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ವರದಾನವಾಗಿದೆ ಎಂದು ಅಜ್ಜೀಪುರ ಪಟ್ಟದ ಮಠದ ಶ್ರೀ ನಂದೀಶ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಅಜ್ಜೀಪುರ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದ ಶ್ರೀಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಬಡ ಮಕ್ಕಳ ಅನುಕೂಲಕ್ಕಾಗಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ತೆರೆದರು. ವಿದ್ಯಾರ್ಥಿ ನಿಲಯ ಹಾಗೂ ದಾಸೋಹ ವ್ಯವಸ್ಥೆ ಕಲ್ಪಿಸಿದ್ದರು. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಬಹುತೇಕರು ರಾಜ್ಯದಲ್ಲಿ ಮಾತ್ರವಲ್ಲದೆ ದೇಶ, ವಿದೇಶದಲ್ಲೂ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಸಂತಸದ ಸಂಗತಿ. ಇನ್ನು ಈ ಭಾಗಕ್ಕೆ ಹೆಚ್ಚಿನ ಕಾಳಜಿಯನ್ನು ವಹಿಸಿದ್ದ ಶ್ರೀಗಳ ಶ್ರಮದಿಂದ ಜೆಎಸ್‌ಎಸ್ ಸಂಸ್ಥೆಗಳನ್ನು ತೆರೆದಿದ್ದು, ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಮುರುಡೇಶ್ವರ ಸ್ವಾಮಿ, ಉಪನ್ಯಾಸಕ ಶಿವಕುಮಾರ್, ಮುಖ್ಯ ಶಿಕ್ಷಕ ಜಯಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net