

ಪಡುಬಿದ್ರಿ: ಕಾಪು ತಾಲೂಕಿನ ಶಿವ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಶಿವರಾತ್ರಿ ಆಚರಣೆ ಬುಧವಾರ ನಡೆಯಿತು.
ಉಚ್ಚಿಲ, ಪಲಿಮಾರು, ಹೆಜಮಾಡಿ ಮಹಾಲಿಂಗೇಶ್ವರ ಹಾಗೂ ಮಜೂರು ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಕಳತ್ತೂರು, ಜಲಂಚಾರು ಮಹಾಲಿಂಗೇಶ್ವರ, ಎಲ್ಲೂರು ಮಹತೋಭಾರ ಶ್ರೀ ವಿಶ್ವೇಶರ, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಸೇರಿದಂತೆ ಶಿವ ದೇಗುಲಗಳಲ್ಲಿ ಭಜನೆ ಸಹಿತ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.
ಮೂಡು ಪಲಿಮಾರು ಧರ್ಮಚಾವಡಿ ಶ್ರೀ ಆದಿ ಬ್ರಹ್ಮಲಿಂಗೇಶ್ವರ, ಪಾರ್ವತಿ ದೇವಿ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ, ಸಾರ್ವಜನಿಕ ಹೂವಿನ ಪೂಜೆ ಹಾಗೂ ಭಜನಾ ಮಂಗಲೋತ್ಸವ ನಡೆಯಿತು. ಬೆಳಗ್ಗೆ ಸಾರ್ವಜನಿಕ ಸೀಯಾಳ ಅಭಿಷೇಕ, ಮಹಾಪೂಜೆ, ಮೂಲ್ಕಿ ಪ್ರಿಯ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಸಂಜೆ 6ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಹಾಗೂ ಮಂಗಲೋತ್ಸವ ನೆರವೇರಿತು
ಪಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಧರ್ಮಶಾಸ್ತ ದೇವಸ್ಥಾನದಲ್ಲಿ ವೈದಿಕ ವಿಧಿಗಳೊಂದಿಗೆ ಧ್ವಜಾರೋಹಣ ನೆರವೇರಿತು. ದೇವರಿಗೆ ಕಲಶಾಭಿಷೇಕ, ಬಲಿ, ಮಹಾಪೂಜೆ, ಬ್ರಾಹ್ಮಣ ಸುಹಾಸಿನಿ ಆರಾಧನೆ ವಿಮಾನೋತ್ಸವ ಹಾಗೂ ಶಿವಪೂಜೆ ನಡೆಯಿತು.
ದೇವಳದ ತಂತ್ರಿಗಳು, ಅರ್ಚಕರು, ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಊರವರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಶಿವರಾತ್ರಿ ಅಂಗವಾಗಿ ವಿವಿಧ ಭಜನಾ ಮಂಡಳಿಗಳು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.