ಮೈಸೂರಿನಲ್ಲಿ ಶ್ರದ್ಧಾ, ಭಕ್ತಿಯೊಂದಿಗೆ ಶಿವರಾತ್ರಿ ಆಚರಣೆ

Shivaratri celebrations in Mysore
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ಶ್ರದ್ಧಾ, ಭಕ್ತಿಯೊಂದಿಗೆ ಮಹಾ ಶಿವರಾತ್ರಿ ಆಚರಿಸಲಾಯಿತು. ದೇವಸ್ಥಾನಗಳು, ಮಠಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಾಗೂ ಪೂಜಾ ಕೈಂಕರ್ಯಗಳು ನಡೆಯಿತು. ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.

ದೇವಸ್ಥಾನಗಳಲ್ಲಿ ಬೆಳಗ್ಗೆ 5 ರಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡಿತು. ಶಿವನಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಹಾಲಿನ ಅಭಿಷೇಕ ಸೇರಿದಂತೆ ವಿವಿಧ ಅಭಿಷೇಕ ಹಾಗೂ ಅರ್ಚನೆಗಳನ್ನು ನೆರವೇರಿಸಲಾಯಿತು. ಹಬ್ಬದ ಪ್ರಯುಕ್ತ ದೇವಸ್ಥಾನಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.

ಚಾಮುಂಡಿಬೆಟ್ಟದ ಮಹಾಬಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ದೇವರಿಗೆ ವಿವಿಧ ಅಭಿಷೇಕ, ಅರ್ಚನೆಗಳು ನಡೆಯಿತು. ಚಾಮುಂಡಿಬೆಟ್ಟದಲ್ಲಿ ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕಂಡು ಬಂದರು. ಬೆಳಗ್ಗೆ ದೇವಾಲಗಳಿಗೆ ತೆರಳಿ ಪೂಜೆ ಸಲ್ಲಿಸಿದ ಭಕ್ತಾದಿಗಳು ರಾತ್ರಿ ಮನೆಗಳಲ್ಲಿ, ದೇವಸ್ಥಾನ ಹಾಗೂ ಮಠಗಳಲ್ಲಿ ಜಾಗರಣೆ ಇದ್ದು ಶಿವನಾಮ ಸ್ಮರಣೆ ಮಾಡಿದರು.

ವಿವಿಧ ದೇಗುಲದಲ್ಲೂ ಪೂಜೆ: ನಗರದ ರಾಮಾನುಜ ರಸ್ತೆಯ ಶ್ರೀ ಕಾಮಕಾಮೇಶ್ವರಿ ದೇವಾಲಯದಲ್ಲೂ ವಿಶೇಷ ಪೂಜೆ ಜರುಗಿತು. ಬೆಳಗ್ಗೆ ದೆವಸ್ಥಾನದಲ್ಲಿ ವಿಜಯ ವಿಶ್ವೇಶ್ವರಸ್ವಾಮಿಗೆ ಏಕಾದಶವಾರ ರುದ್ರಾಭಿಷೇಕ, ಶ್ರೀ ಸ್ವಾಮಿಗೆ ಪ್ರಾಕಾರೋತ್ಸವ, ಸಂಜೆ ನಾಲ್ಕು ಆಯಾಮಗಳಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಸಲಾಯಿತು. ದೇವಾಲಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಬೆಳಗ್ಗೆ 10 ರಿಂದ ರಾತ್ರಿ 2.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಿಂಬುಜಾದೇವಿ ಭಜನಾ ಮಂಡಳಿ, ಶೈಲಾ ತಂಡ, ದ್ವಾರಕಾದ್ರಿ ಭಜನಾ ಮಂಡಳಿ, ಚಿನ್ಮಯ ಭಜನಾ ಮಂಡಳಿ, ಪಟ್ಟಭಿರಾಮ ಭಜನಾ ಮಂಡಳಿ, ಸಪ್ತಾದ್ರಿ ಭಜನಾ ಮಂಡಳಿ, ಚಿಗುರು ಭಜನಾ ಮಂಡಳಿ, ಎಂ.ಬಿ. ಅನಂತಸ್ವಾಮಿ ಸಾಂಸ್ಕೃತಿಕ ಸಂಸ್ಥೆ, ಎ.ವಿ. ದತ್ತಾತ್ರೇಯ ತಂಡ, ಎಚ್.ಕೆ. ರವೀಂದ್ರ, ವೈ.ಆರ್. ನಾಗೇಂದ್ರರಾವ್ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಅಶೋಕ ರಸ್ತೆಯ ಶ್ರೀ ಮುಕ್ಕಣ್ಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ, ಸಹಸ್ರನಾಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಕುರುಬಾರಹಳ್ಳಿ ಸಿದ್ದಾರ್ಥನಗರದ ಶ್ರೀ ಮಲೆಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ದೇವರಿಗೆ ಕ್ಷೀರಾಭಿಷೇಕ, ಪಂಜಾಮೃತ ಅಭಿಷೇಕ, ಮಹಾರುದ್ರಾಭಿಷೇಕ, ಅಷ್ಟೋತ್ತರ ಪೂಜೆ, ಮಹಾಮಂಗಳಾರತಿ ನಡೆಸಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ವಿ.ವಿ.ಮೊಹಲ್ಲಾದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಸ್ಥಾನದಲ್ಲಿ ಉತ್ಸವದ ಅಭಿಷೇಕಗಳು, ಅರ್ಚನೆ, ಪೂಜೆ ನೆರವೇರಿತು. ಲಷ್ಕರ್ ಮೊಹಲ್ಲಾದ ಗರಡಿಕೇರಿಯ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನ, ಹಳೇ ಸಂತೆಪೇಟೆಯ ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಸ್ಥಾನ, ನಂಜರಾಜ ಬಹದ್ದೂರ್ ಛತ್ರದ ಸಮೀಪದ ಅಮೃತೇಶ್ವರ, ಗಂಗೋತ್ರಿ ಬಡಾವಣೆಯ ಮಾರುತಿ ದೇವಸ್ಥಾನ, ಖಿಲ್ಲೆ ಮೊಹಲ್ಲಾ ಭೈರವೇಶ್ವರಸ್ವಾಮಿ ದೇವಸ್ಥಾನ, ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ, ನಾಗಲಿಂಗೇಶ್ವರ ಮಠ, ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಾಲಯ, ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆ ಅಮೃತೇಶ್ವರ ದೇವಾಲಯ ಸೇರಿದಂತೆ ವಿವಿಧೆಡೆ ಶಿವರಾತ್ರಿ ಪ್ರಯುಕ್ತ ಶಿವನಿಗೆ ವಿಶೇಷ ಪೂಜೆ ನೆರವೇರಿತು.

ಸಂಗೀತ ಸಂಭ್ರಮ: ಚಾಮುಂಡಿಪುರಂನ ಶಂಕರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಪಯುಕ್ತ ಬುಧವಾರ ಸಂಜೆ 6 ರಿಂದ ಗುರುವಾರ ಬೆಳಗ್ಗೆ 6ರವರೆಗೆ ಶಿವರಾತ್ರಿ ಸಂಗೀತ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಾಯಕರುಗಳು ಶಿವನ ಕುರಿತು ಗೀತೆಗಳನ್ನು ಹಾಡಿ ಭಕ್ತಿಯ ವಾತಾವರಣ ನಿರ್ಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net