

ಮೈಸೂರು: ಈ ವರ್ಷ ಕಠಿಣವಾದ ದಿನಗಳನ್ನು ದೇಶ ಎದುರಿಸ ಬೇಕಾಗುತ್ತದೆ, ಪ್ರಾಕೃತಿಕ ಅನಾಹುತಗಳು ಸಂಭವಿಸುತ್ತದೆ. ಹಾಗಾಗಿ ಜನರು ದೈವಿಕ ಭಾವನೆ ಹೊಂದಬೇಕು ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತಾದಿಗಳಿಗೆ ತಿಳಿಸಿದರು.
ಮಹಾಶಿವರಾತ್ರಿ ಪ್ರಯುಕ್ತ ಬುಧವಾರ ಶ್ರೀ ಅವಧೂತ ದತ್ತಪೀಠದಲ್ಲಿ ಜನತೆಗೆ ಆಶೀರ್ವಚನ ನೀಡಿ ಮಾತನಾಡಿ, ಈ ವರ್ಷ ಪ್ರಾಕೃತಿಕ ವಿಕೋಪಗಳು,ಯುದ್ಧಗಳು, ಅಪಮೃತ್ಯುಗಳು ಸಂಭವಿಸಲಿವೆ. ಹರಿ, ಶಿವನ ಕೃಪೆ ಇರುವುದರಿಂದ ಇವು ಕಡಿಮೆಯಾದರೂ ಜನತೆ ಸಹ ದೈವದ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.
ಮುಂದೆ ಆಗುವ ಅನಾಹುತಗಳು ಕಷ್ಟಗಳು ತಪ್ಪಬೇಕಾದರೆ ಯುವಜನರು ಸೇರಿದಂತೆ ಇಡೀ ದೇಶದ ಜನತೆ ಮತ್ತು ಪ್ರಜಾಪ್ರತಿನಿಧಿಗಳು ದೈವಿಕ ಭಾವನೆ ಹೊಂದಿರಬೇಕು. ಆದಷ್ಟು ದೇವಸ್ಥಾನಗಳನ್ನು ದರ್ಶಿಸಬೇಕು, ಪುರಾತನ ಆಲಯಗಳನ್ನು ದರ್ಶನ ಮಾಡಬೇಕು ದೇವಸ್ಥಾನಗಳ ಜೀರ್ಣೋದ್ಧಾರಗಳು ಆದರೆ ಇನ್ನೂ ಒಳಿತಾಗಲಿದೆ ಎಂದರು.
ಪ್ರಜಾಪ್ರತಿನಿಧಿಗಳು ದೈವಿಕ ಭಾವನೆ ಹೊಂದುವ ಜತೆಗೆ ಎಲ್ಲಾ ಮಠಗಳು ಉಪಾಸನೆಗಳು ಒಂದೇ ಎಂಬುದನ್ನು ಅರಿಯಬೇಕು. ನಮ್ಮ ಆಚಾರ್ಯರು ಕೂಡ ಮಹತ್ವದ ಸಂದೇಶಗಳನ್ನು ನೀಡಿದ್ದಾರೆ. ಅವರ ಆಶಯಗಳನ್ನು ಸಂದೇಶಗಳನ್ನು ಪಾಲಿಸಬೇಕು ನಾವೆಲ್ಲರೂ ಸಾತ್ವಿಕ ಜೀವನ ನಡೆಸಿದರೆ ಖಂಡಿತ ಕಷ್ಟಕೋಟಲೆಗಳಿಂದ ಸ್ವಲ್ಪವಾದರೂ ಪಾರಾಗಬಹುದು ಎಂದು ತಿಳಿಸಿದರು
ಮುಂದಿನ ದಿನಗಳಲ್ಲಿ ಅನಾಹುತಗಳು ಇದ್ದೇ ಇರುತ್ತದೆ. ಮೊದಲು ಜನರಲ್ಲಿರುವ ಅತೃಪ್ತಿ ಭಾವನೆ ಹೋಗಬೇಕು ಸದಾ ಹರಿಹೀ ಓಂ, ಓಂ ನಮಃ ಶಿವಾಯ ಜಪಿಸಬೇಕು, ಇಂದು ಅತ್ಯಂತ ಶುಭದಿನ, ಎಲ್ಲ ಗ್ರಹಗಳು ಒಂದೇ ರೇಖೆಯಲ್ಲಿ ಬಂದಿರುತ್ತದೆ ಎಂದರು.
ಈ ಬಾರಿಯ ಕುಂಭ ಮೇಳ ಅತ್ಯಂತ ಶುಭ, ಅದರಲ್ಲೂ ಆಧ್ಯಾತ್ಮಿಕ ಪ್ರಪಂಚಕ್ಕೆ ಶುಭಕರವಾಗಿದೆ. ದೇಶದ ಜನತೆ ಧಾರ್ಮಿಕತೆ ಬಗ್ಗೆ ಅತ್ಯಂತ ಶ್ರದ್ಧೆ ತೋರಿದ್ದಾರೆ, ಇದು ಅದೃಷ್ಟವೇ ಸರಿ. ಅತೀ ದೊಡ್ಡ ಸಂಖ್ಯೆಯಲ್ಲಿ ಯುವಜನರು ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದು ಅವರಲ್ಲಿ ನಮ್ಮ ಧರ್ಮದ ಬಗ್ಗೆ ಜಾಗೃತಿ ಮೂಡುತ್ತಿದೆ, ಇದು ಒಳ್ಳೆಯದು ಎಂದು ಶ್ರೀಗಳು ಸಂತಸಪಟ್ಟರು.
ಇಡೀ ಕುಂಭಮೇಳದ ದಿನಗಳಲ್ಲಿ ನಮ್ಮ ದೇಶ ಅಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ಒಳ್ಳೆಯದಾಗಲಿ ಎಂದು ನಮ್ಮ ಭಾರತ ಪ್ರಾರ್ಥಿಸಿದೆ. ನಮ್ಮ ವೇದ ಪದ್ಧತಿಯು ಸಹ ಇದನ್ನೇ ಬೋಧಿಸುತ್ತದೆ. ಇದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂದು ಹೇಳಿದರು.
ಈ ಮಹಾಶಿವರಾತ್ರಿಯಂದು ಇಡೀ ನಾಡಿನ ಜನತೆಗೆ ಶುಭವಾಗಲಿ, ಎಲ್ಲರೂ ತಪ್ಪದೇ ಶಿವ ಸ್ಮರಣೆ ಮಾಡಿ ಹರಾ,ಹರಾ ಮಹಾದೇವ ಎಂದು ಹೇಳಿ ಓಂ ನಮಃ ಶಿವಾಯ ಎಂದು ಹೇಳುತ್ತಾ ಒಂದು ಚೊಂಬು ನೀರಿನ ಅಭಿಷೇಕ ಮಾಡಿ ಆ ಶಿವನೇ ಎಲ್ಲರನ್ನು ಆಶೀರ್ವದಿಸುತ್ತಾನೆ ಎಂದರು.
ತೀರ್ಥ ಸ್ನಾನ
ಆಶ್ರಮದ ಸಪ್ತರ್ಷಿ ಸರೋವರದಲ್ಲಿ ಉಚಿತವಾಗಿ ತೀರ್ಥ ಸ್ನಾನ ಮಾಡಲು ಏರ್ಪಡಿಸಲಾಗಿತ್ತು. ಪ್ರಯಾಗರಾಜದಲ್ಲಿ ನಡೆಯುತ್ತಿರುವ ತ್ರಿವೇಣಿ ಸಂಗಮದ ಕುಂಭಮೇಳಕ್ಕೆ ಹೋಗಲಾಗದವರು ಈ ತೀರ್ಥ ಸ್ನಾನದ ಅವಕಾಶವನ್ನು ಉಪಯೋಗಿಸಿಕೊಂಡರು. ಆಶ್ರಮದ ಸಪ್ತರ್ಷಿ ಸರೋವರದಲ್ಲಿ ಪ್ರಯಾಗರಾಜದಿಂದ ಸ್ವಾಮೀಜಿ ಅವರು ಫೆ.18ರಂದು ಪುಣ್ಯ ಸ್ನಾನ ಆಚರಿಸಿದಾಗ ತಂದಿರುವ ತ್ರಿವೇಣಿ ಪವಿತ್ರ ಜಲ, ಭಾರತದ ಪವಿತ್ರ ನದಿಗಳ ಜಲವನ್ನು ಮಿಶ್ರಣ ಮಾಡಲಾಗಿತ್ತು.