

ಬೆಳಗಾವಿ : ಶಿವರಾತ್ರಿ ಅಂಗವಾಗಿ ಸಾಂಸ್ಕೃತಿಕ ಶ್ರೀಮಂತಿಕೆಯ ಬೆಳಗಾವಿ ನಗರ ಸೇರಿದಂತೆ ಜಿಲ್ಲಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಶನಿವಾರ ಸಂಭ್ರಮದ ಜತೆಗೆ ಭಕ್ತಿಭಾವದಿಂದ ಆಚರಿಸಲಾಯಿತು. ಜಿಲ್ಲೆಯ ಶಿವ ದೇವಾಲಯಗಳಿಗೆ ಭಕ್ತರು ಪರಿವಾರ ಸಮೇತ ಆಗಮಿಸಿ ಭಕ್ತಿ ಸಮರ್ಪಣೆಗೈದರು. ಹೂ, ಕಾಯಿ, ಕರ್ಪೂರ, ಬಿಲ್ವಪತ್ರೆ, ಕಾಣಿಕೆ, ನೈವೇದ್ಯಗಳನ್ನು ಅರ್ಪಿಸಿ ಶಿವನ ಕೃಪೆಗಾಗಿ ಪ್ರಾರ್ಥಿಸಿದರು.
ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧ ಶಿವ ದೇವಾಲಯಗಳಲ್ಲಿ ಜಲಾಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ರುದ್ರಕಲಷ ಸ್ಥಾಪನೆ, ರುದ್ರಹೋಮ, ಬಿಲ್ವಾರ್ಚನೆ, ಮಹಾಮಂಗಳಾರತಿ ಜತೆಗೆ ವಿಶೇಷ ಹೋಮ ಹವನಗಳು ನಡೆದವು. ಧ್ವನಿವರ್ಧಕಗಳ ಮೂಲಕ ಹೊರ ಹೊಮ್ಮುತ್ತಿದ್ದ ಶಿವಸ್ತೊತ್ರ, ಮಂತ್ರಘೋಷಣೆ, ಘಂಟೆ, ಜಾಗಟೆ, ಡಮರು ಮತ್ತು ಇತರೆ ವಾದ್ಯ ಪರಿಕರಗಳ ನಾದ ಭಕ್ತರನ್ನು ಶಿವನಾಮ ಸ್ಮರಣೆಯಲ್ಲಿ ಮಿಂದೇಳುವಂತೆ ಮಾಡಿ, ಪ್ರತಿ ದೇವಾಲಯದಲ್ಲೂ ಜಾತ್ರೆಯ ಸಡಗರ ಮನೆ ಮಾಡಿತ್ತು.
ನಗರದ ಕಪಿಲೇಶ್ವರ ದೇವಸ್ಥಾನ, ಮಿಲಿಟರಿ ಮಹಾದೇವ, ಶ್ರೀಸಿದ್ಧೆಶ್ವರ, ಕಾಕತಿ ಶ್ರೀಸಿದ್ಧೆಶ್ವರ, ವಡಗಾವಿ ಆನಂದನಗರದ ಶಿವಮಂದಿರ, ನೆಹರುನಗರದ ಬಸವಣ್ಣ ಮಹಾದೇವ ಮಂದಿರ, ಟಿಳಕವಾಡಿ ಮಹರ್ಷಿ ಮಂದಿರದ ಶಿವಲಿಂಗ ಮಂದಿರ, ಟಿಳಕವಾಡಿ ಚೌಗುಲೆವಾಡಿ ಶಿವಲಿಂಗಮಂದಿರ, ಕೆಎಲ್‌ಇ ಕ್ಯಾಂಪಸ್‌ನ ಶಿವಾಲಯ, ವೀರಭದ್ರ ದೇವಸ್ಥಾನ, ರಾಮಲಿಂಗಖಿಂಡಗಲ್ಲಿಯ ಶ್ರೀರಾಮಲಿಂಗೇಶ್ವರ, ಬಸವನಗಲ್ಲಿ ಬಸವನ ಮಂದಿರ, ಶನಿವಾರಕೂಟದ ಮಹಾದೇವ ಆರ್ಕೆಡ್, ಚಿದಂಬರನಗರದ ಶಿವಚಿದಂಬರ ಮಂದಿರ, ನಾಗನೂರು ಮಠ, ಹುಕ್ಕೇರಿ ಹಿರೇಮಠ ಮತ್ತು ಕಾರಂಜಿಮಠ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಆರಾಧನೆ ಜತೆಗೆ ಶಿವನ ದರ್ಶನ ಪಡೆದು ಮಹಾಶಿವರಾತ್ರಿ ಮಹಿಮೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.