

ತುಮಕೂರು : ಅರೆಯೂರು ಸುಕ್ಷೇತ್ರ ಶ್ರೀ ಜ್ಯೋತಿರ್ಲಿಂಗ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ 23ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಸ್ವಾಮಿಯ ಮಹಾರಥೋತ್ಸವವು ವೈಭವದಿಂದ ಜರುಗಿತು. ನಾಡಿನೆಲ್ಲಡೆಯಿಂದ ಭಕ್ತರು ಸಂಭ್ರಮದಿಂದ ಭಾಗಿಯಾಗಿದ್ದರು.
ಹೆಬ್ಬೂರು ಹೋಬಳಿ ಅರೆಯೂರು ಸುಕ್ಷೇತ್ರದಲ್ಲಿ ಮಹಾಶಿವರಾತ್ರಿ ಹಬ್ಬವಾದ ಮಂಗಳವಾರ ಮಾಘ ಬಹುಳ ತ್ರಯೋದಶಿಯ ಮಧ್ಯಾಹ್ನ 12.30ರಿಂದ 1.30 ಗಂಟೆಯೊಳಗೆ ಸಲ್ಲುವ ಅಭಿಜಿನ್ ಲಗ್ನದಲ್ಲಿ ಮಾಕನಹಳ್ಳಿ ಜಂಗಮಮಠದ ಶ್ರೀ ಗಂಗಾಧರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾರಥೋತ್ಸವ ನೆರವೇರಿತು. ರಥೋತ್ಸವಕ್ಕೆ ಮುನ್ನ ವೈದ್ಯನಾಥೇಶ್ವರ ಸಾಮಿಗೆ ವಿಶೇಷ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ರಥಾಂಗ ಹೋಮ, ಗಂಗಾಪೂಜೆ ನೆರವೇರಿಸಲಾಯಿತು.
ಸಹಸ್ರಾರು ಭಕ್ತರು ಸಾಕ್ಷಿ: ಪ್ರಸಿದ್ಧ ಅರೆಯೂರು ಸ್ವಾಮಿಯ ರಥೋತ್ಸವಕ್ಕೆ ನಾಡಿನೆಲ್ಲಡೆಯಿಂದ ಭಕ್ತ ಸಾಗರ ಹರಿದುಬಂದಿದ್ದು ರಥಕ್ಕೆ ತೂರು ಬಾಳೆಹಣ್ಣ, ದವನವನ್ನು ಎಸೆದು ಭಕ್ತರು ಸಂಭ್ರಮಿಸಿದರು. ಜಾತ್ರೆಯಲ್ಲಿ ಭಾಗಿಯಾದ ಸಹಸ್ರಾರು ಭಕ್ತರಿಗೆ ಅಚ್ಚುಕಟ್ಟಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು, ಸ್ವಾಮಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದ ವತಿಯಿಂದ ಭಕ್ತರಿಗೆ ಮಜ್ಜಿಗೆ, ಪಾನಕ, ಹೆಸರುಬೇಳೆ ವಿತರಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕರೊನಾದಿಂದ ಜಾತ್ರಾ ಮಹೋತ್ಸವ ಕಳೆಗುಂದಿದ್ದು ಈ ವರ್ಷ ಜನಸಾಗರವೇ ಹರಿದುಬಂದಿತ್ತು. ಇಡೀ ದಿನ ಭಕ್ತರಿಗೆ, ಸಾರ್ವಜನಿಕರಿಗೆ ತುಮಕೂರಿನಿಂದ ಅರೆಯೂರಿಗೆ ವಿಶೇಷ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಸಹ ಇತ್ತು.
8ರಂದು ತೆಪ್ಪೋತ್ಸವ : ವೈದ್ಯನಾಥೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಸ್ವಾಮಿಗೆ ಮಾ.2ರಂದು ಅಕ್ಕಿಪೂಜೆ, ನಂದಿವಾಹನ, 3 ರಂದು ಕುದರೆವಾಹನ, 4 ರಂದು ಹುಲಿವಾಹನ, 5 ರಂದು ಬಸವವಾಹನ, 6 ರಂದು ಹೂವಿನ ವಾಹನ, 7 ರಂದು ಕುದರೆ ವಾಹನ, 8 ರಂದು ಮುತ್ತಿನ ಪಾಲಕಿ ಉತ್ಸವ ಜರುಗಲಿವೆ. ಮಾ.9ರಂದು ಸ್ವಾಮಿಯ ಅದ್ದೂರಿ ತೆಪ್ಪೋತ್ಸವ ಜರುಗಲಿದ್ದು ವಾಲ್ಮೀಕಿ ಸಮಾಜ, ಆದಿಕರ್ನಾಟಕ ಸಮಾಜಬಾಂಧವರು ನೇತೃತ್ವ ವಹಿಸಲಿದ್ದಾರೆ. ಪ್ರತಿನಿತ್ಯ ದಾಸೋಹ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ಏರ್ಪಡಿಸಲಾಗುವುದು.