

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ಡಾ. ಕೆ.ಶಿವರಾಮ ಕಾರಂತ ಲೇಔಟ್‌ಗೆ ಜಮೀನು ನೀಡಿರುವ ರೈತರು ಹೆಚ್ಚಿನ ಪರಿಹಾರಕ್ಕಾಗಿ ಮತ್ತೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಪ್ರಸ್ತುತ ಬಡಾವಣೆಯ ಸಿವಿಲ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಸದ್ಯದಲ್ಲೇ ಮೂಲಸೌಕರ್ಯ ಕಲ್ಪಿಸುವ ಕೆಲಸ ಆರಂಭಿಸಲು ಬಿಡಿಎ ಮುಂದಾಗಿದೆ. ಈ ಹಂತದಲ್ಲಿ ರೈತರಿಗೆ ಇನ್ನೂ ಪರಿಹಾರ ನೀಡಿಕೆಯಲ್ಲಿ ಸ್ಪಷ್ಟತೆ ಮೂಡಿಸಲು ಪ್ರಾಧಿಕಾರ ವಿಲವಾಗಿದೆ. ಜಮೀನು ಬಿಟ್ಟುಕೊಟ್ಟಿರುವ ಸಂತ್ರಸ್ತರಿಗೆ ಶೇ.40 ಅಭಿವೃದ್ಧಿಪಡಿಸಿದ ನಿವೇಶನವನ್ನು ನೀಡಲು ಪ್ರಮಾಣಪತ್ರವನ್ನು ವಿತರಿಸಲಾಗುತ್ತಿದೆ. ಇದಕ್ಕೆ ಕಾನೂನು ವ್ಯಾಪ್ತಿಯಲ್ಲಿ ಕಿಮ್ಮತ್ತಿಲ್ಲವೆಂದು ಆಕ್ಷೇಪಿಸಿ ರೈತರು ಪ್ರತಿಭಟನೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸ್ಥಳೀಯ ರೈತ ಮುಖಂಡರೊಂದಿಗೆ ರಾಷ್ಟ್ರೀಯ ರೈತ ಸಮನ್ವಯ ಸಮಿತಿಯ ಮುಖ್ಯಸ್ಥೆ ಚುಕ್ಕಿ ನಂಜುಂಡಸ್ವಾಮಿ ಅವರು ಮಾತುಕತೆ ನಡೆಸಿ ಹೆಚ್ಚಿನ ಪರಿಹಾರಕ್ಕಾಗಿ ಹೋರಾಟ ಮಾಡುವುದು ಒಳಿತು ಎಂಬ ಸಂದೇಶವನ್ನು ರವಾನಿಸಿದ್ದಾರೆ. 2013ರ ಭೂ ಪರಿಹಾರ ಕಾಯ್ದೆಯಡಿಯಲ್ಲಿ ಪರಿಹಾರ ಒದಗಿಸುವಂತೆ ರೈತರು ಪಟ್ಟು ಹಿಡಿದಿದ್ದಾರೆ. ಇದನ್ನು ಬಿಡಿಎ ಸಹಿತ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗದ ಕಾರಣ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ಸಂಬಂಧ ಬುಧವಾರ (ಸೆ.20) ದಿನಾಂಕ ಘೋಷಣೆ ಮಾಡಲಾಗುವುದು ಎಂದು ರೈತ ಮುಖಂಡ ರಮೇಶ್ ಗಾಮಗೊಂಡನಹಳ್ಳಿ ತಿಳಿಸಿದ್ದಾರೆ.