ನಗರಸಭೆ ಸದಸ್ಯ ಶಿವರಾಜನಾಯಕಗೆ ಸವಾಲು ಹಾಕಿದ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್

b.k.ravikumar
Published on

ಚಾಮರಾಜನಗರ: 'ನಾವು ಮನಸ್ಸು ಮಾಡಿದರೆ ಕಾಂಗ್ರೆಸ್‌ನವರು ಮನೆಯಿಂದ ಹೊರಗೆ ಬರೋಕೆ ಆಗಲ್ಲ' ಎನ್ನಲಾದ ನಗರಸಭೆ ಸದಸ್ಯ ಶಿವರಾಜನಾಯಕ ಹೇಳಿಕೆಗೆ ತಿರುಗೇಟು ನೀಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್ ಕಾಂಗ್ರೆಸ್‌ನವರು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ. ಧೈರ್ಯವಿದ್ದರೆ ಅವರು ಹೇಳಿರುವಂತೆ ಮಾಡಲಿ ಎಂದು ಸವಾಲು ಹಾಕಿದರು.

ನಗರಸಭೆ ಕಾಂಗ್ರೆಸ್ ಸದಸ್ಯ ಆರ್.ಪಿ.ನಂಜುಂಡ ಸ್ವಾಮಿ ದಸರಾ ಕಾರ್ಯಕ್ರಮದಲ್ಲಿ ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ಈ ಸಂಬಂಧ ಕಾನೂನು ಕ್ರಮ ಜರುಗಿದೆ. ಇದೇ ವಿಚಾರವನ್ನು ನೆಪವಾಗಿಟ್ಟುಕೊಂಡು ನಗರಸಭೆ ಬಿಜೆಪಿ ಸದಸ್ಯ ಶಿವರಾಜನಾಯಕ ಟೀಕಿಸುವ ಭರದಲ್ಲಿ ನಾವು ಮನಸ್ಸು ಮಾಡಿದರೆ ಕಾಂಗ್ರೆಸ್‌ನವರು ಮನೆಯಿಂದ ಹೊರಗೆ ಬರಲು ಆಗಲ್ಲ ಎಂದಿದ್ದು, ಈ ಗೊಡ್ಡು ಬೆದರಿಕೆಗಳಿಗೆ ಕಾಂಗ್ರೆಸ್‌ನವರು ಹೆದರಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರ್.ಪಿ.ನಂಜುಂಡಸ್ವಾಮಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಕಾರಣವಿದೆ. ಹಾಗೆಂದು ಅವರನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅವರ ವಾರ್ಡ್‌ನಲ್ಲಿ ದಸರಾ ವಿದ್ಯುತ್ ದೀಪಾಲಂಕಾರ ಮಾಡದೆ ಇರುವುದನ್ನು ವಿರೋಧಿಸಿ ಈ ರೀತಿ ಪ್ರತಿಭಟಿಸಿದರು. ಸಚಿವರು ಸ್ಥಳಕ್ಕೆ ಭೇಟಿಯನ್ನೂ ನೀಡಿದರು. ವೇದಿಕೆಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿರುವುದು ಅವರು ಕೈಗೊಂಡ ವೈಯಕ್ತಿಕ ಹೋರಾಟ. ಈ ಘಟನೆ ಬಗ್ಗೆ ಸಚಿವರ ಬಳಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರೂ ಸಹ ವಿಷಾದ ವ್ಯಕ್ತಪಡಿಸಿದ್ದಾರೆ ಎಂದರು.

ಇನ್ನು ಗುಂಡ್ಲುಪೇಟೆಯಲ್ಲಿ ಭಾರತ್ ಐಕ್ಯತಾ ಯಾತ್ರೆ ಹಿನ್ನೆಲೆಯಲ್ಲಿ ಫ್ಲೆಕ್ಸ್ ಹರಿದು ಹಾಕಿರುವವರನ್ನು ಬಂಧಿಸಲಿ. ಕೆಲವು ದಿನಗಳ ಹಿಂದೆ ಜಿಲ್ಲಾ ಬಿಜೆಪಿ ಮೋರ್ಚಾ ಅಧ್ಯಕ್ಷ ಪ್ರಣಯ್ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಂಟಿಸುವುದಾಗಿ ಹೇಳಿದ್ದರು. ಪೊಲೀಸರು ಇವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹೇಶ್ ಕುದರ್, ಚಂಗುಮಣಿ, ನಗರಸಭೆ ಸದಸ್ಯ ರಾಜಪ್ಪ, ಮಂಜು, ನಟರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net