

ಕೊಪ್ಪಳ (ಕುಷ್ಟಗಿ): ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಮುಖ್ಯಮಂತ್ರಿ ಬಗ್ಗೆ ಯಾವುದೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿಯೇ ಹೇಳಿಕೊಳ್ಳಬೇಕಿತ್ತು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆಗೆಂದು ಮಂಗಳವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮನ್ನು ದೇವರಾಜ ಅರಸು ಎಂದು ಯಾವತ್ತೂ ಹೋಲಿಕೆ ಮಾಡಿಕೊಂಡಿಲ್ಲ. ದೇವರಾಜ ಅರಸು ಅವರ ಮಾದರಿಯಲ್ಲಿ ಆಡಳಿತ ಮಾಡುತ್ತಿರುವ ಅವರನ್ನು ಅವರ ಅಭಿಮಾನಿಗಳು ಹೋಲಿಕೆ ಮಾಡುತ್ತಿದ್ದಾರೆ. ಹೀಗೆ ಹೋಲಿಕೆ ಮಾಡದಂತೆ ಅಭಿಮಾನಿಗಳಿಗೂ ಸಿದ್ದರಾಮಯ್ಯ ಹೇಳಿದ್ದಾರೆ. ಹಿರಿಯ ನಾಯಕರುಗಳ ಅಸಮಾಧಾನವನ್ನು ಹೈಕಮಾಂಡ್ ಶಮನ ಮಾಡಲಿದೆ ಎಂದರು.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿರುವ ಜೆಡಿಎಸ್ ಪಕ್ಷವೂ ಸಹ ಕೋಮುವಾದ ಪಕ್ಷವಾಗಲಿದೆ. ಎರಡೂ ಪಕ್ಷಗಳು ಮಾಡಿಕೊಳ್ಳುತ್ತಿರುವುದು ಅಪಮೈತ್ರಿಯಾಗಲಿದೆ ಎಂದು ಟೀಕಿಸಿದರು. ಮಾಜಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಪುರ, ಹಸನಸಾಬ ದೋಟಿಹಾಳ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.