

ಮಂಡ್ಯ: ಮನುಷ್ಯನಿಗೆ ಸಂಸ್ಕಾರ ಅತ್ಯಂತ ಮುಖ್ಯ. ತನ್ನ ಅಂಗಾಂಗಗಳನ್ನು ಸಮಾಜದ ಒಳಿತಿಗಾಗಿ ಬಳಸಬೇಕು. ಆರೋಗ್ಯ, ನೆಮ್ಮದಿ ಸುಖ ಶಾಂತಿಗಾಗಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕು ಸಾಗಿಸಿದರೆ ಆತನ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದು ಕೊಮ್ಮೇರಹಳ್ಳಿ ಶಾಖಾಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಶಿವ ಶರಣೆ ಅಮ್ಮಯ್ಯಮ್ಮ ದುರ್ಗೇಗೌಡ ಪ್ರತಿಷ್ಠಾನದಿಂದ ಆಯೋಜಿಸಿದ್ದ ನಾಲ್ಕನೇ ಶಿವಾರಾಧನಾ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ತನ್ನ ಇಂದ್ರಿಯವನ್ನು ಹತೋಟಿ ಮಾಡುವ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಬೇಕು. ಸಾಹಿತಿ ಡಾ.ಶಂಕರ್ ಹಲ್ಲೇಗೆರೆ ಅವರು ಜನನಿ, ಜನ್ಮ ಭೂಮಿಯ ಬಗ್ಗೆ ವಿಶೇಷ ಅಭಿಮಾನ ತೋರುವ ಮೂಲಕ ಶರಣ ಸಮ್ಮೇಳನವನ್ನು ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯ. ಬದುಕಿನ ಸಾರ್ಥಕತೆ ಪಡೆಯಲು ಇಂತಹ ಶರಣ ಸಮ್ಮೇಳನಗಳು ಅತ್ಯಂತ ಪ್ರಮುಖ ಎಂದರು.
ಕೊಡಗಿನ ಎಲೆಮುದ್ದನಹಳ್ಳಿ ವಿರಕ್ತ ಮಠದ ಮಲ್ಲೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ವಹಿಸಿದ್ದರು. ಉದ್ಘಾಟನೆಯನ್ನು ಮೈಸೂರಿನ ಬಸವ ಜ್ಞಾನ ಮಂದಿರದ ಅಧ್ಯಕ್ಷೆ ಡಾ.ಮಾತೆ ಬಸವಾಂಜಲಿ ನೆರವೇರಿಸಿದರು.
ಕುಣಿಗಲ್ ಸಿದ್ದರಾಮ ಚೈತನ್ಯ ಮಹಾಸ್ವಾಮೀಜಿ, ಹಾಸನದ ಸಂಗಮೇಶ್ವರ ಸ್ವಾಮೀಜಿ, ಕೊಡಗಿನ ಬಸವಲಿಂಗ ಸ್ವಾಮೀಜಿ, ಮಹಾಂತ ಶಿವಲಿಂಗ ಸ್ವಾಮೀಜಿ, ಅರಕಲಗೂಡು ಬಸವ ಕಲ್ಯಾಣ ಮಠದ ಸದಾಶಿವ ಸ್ವಾಮೀಜಿ, ಪ್ರತಿಷ್ಠಾನದ ಅಧ್ಯಕ್ಷ ಡಾ.ಶಂಕರ್ ಹಲ್ಲೇಗೆರೆ, ಉಪಾಧ್ಯಕ್ಷೆ ಸಂಗೀತಾ ಶಂಕರ್, ಕರಾವಳಿ ಒಕ್ಕೂಟದ ಗೌರವಾಧ್ಯಕ್ಷ ಡಾ.ಎಸ್.ಶ್ರೀನಿವಾಸಶೆಟ್ಟಿ, ಗಾಯಕ ಕಲಾಶ್ರೀ ಸಿ.ಪಿ.ವಿದ್ಯಾಶಂಕರ್, ಮಾತನಾಡುವ ಬೊಂಬೆ ಖ್ಯಾತಿಯ ಸುಮಾ ರಾಜ್‌ಕುಮಾರ್ ಇತರರಿದ್ದರು.
ಇದೇ ವೇಳೆ ಸಾಹಿತಿ ತ.ನಾ.ಶಿವಕುಮಾರ್ ಅವರಿಗೆ ಆಧ್ಯಾತ್ಮ ರತ್ನ ಪ್ರಶಸ್ತಿಯನ್ನು ಅರಕಲಗೂಡಿನ ಜಯದೇವ ಸ್ವಾಮಿ ಪ್ರದಾನ ಮಾಡಿದರು. ಶಂಕರ್ ಹಲ್ಲೆಗೆರೆ ರಚಿತ ತತ್ವಪದಗಳ ಭಾಗ-4 ಹಾಗೂ ದೇಹವೆಂಬ ಡಂಬ ಸಿಡಿ ಮತ್ತು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರ ಸುಜ್ಞಾನ ಚಿಂತನ ಎಂಬ ಕೃತಿ ಬಿಡುಗಡೆ ಮಾಡಲಾಯಿತು.