

ಉಡುಪಿ: ಶಿವಪಾಡಿಯ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಅಂಗವಾಗಿ ಶನಿವಾರ ಮುಂಜಾನೆ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಹಾಗೂ ಅಷ್ಟೋತ್ತರಸಹಸ್ರ ನಾಳಿಕೇರ ಗಣಯಾಗ ನೆರವೇರಿತು.
ಗಣಯಾಗದ ಪೂರ್ಣಾಹುತಿ, ಬ್ರಹ್ಮಚಾರಿ ಆರಾಧನೆ, ಕನ್ನಿಕಾ ಆರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ, ದೇವರಿಗೆ ಮಹಾಪೂಜೆ, ಮಹಾಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್ ಮತ್ತು ಶಿವಪಾಡಿ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.
ಇಂದು ಶ್ರೀಸೂಕ್ತ ಹೋಮ
ಫೆಬ್ರವರಿ 26ರಂದು ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 7:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ, ದೇವಸ್ಥಾನದ ಪ್ರಾಂಗಣದಲ್ಲಿ ಬೆಳಗ್ಗೆ 8 ರಿಂದ ಆಚಾರ್ಯಾದಿ ಋತ್ವಿಗ್ವರಣ, 10 ಋತ್ವಿಜರಿಂದ ಸಪ್ತಶತೀ ಪಾರಾಯಣ, ಶ್ರೀಸೂಕ್ತ ಹೋಮ , ಸಾಯಂಕಾಲ 6 ರಿಂದ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನೆರವೇರಲಿವೆ.