

ಉಡುಪಿ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿ ಆಶ್ರಯದಲ್ಲಿ ಶಿವಪಾಡಿ ದೇವಸ್ಥಾನದಲ್ಲಿ ಫೆ. 22 ರಿಂದ ಮಾ.5ರವರೆಗೆ 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನ ಅತಿರುದ್ರ ಮಹಾಯಾಗ ಜರಗಲಿದೆ ಎಂದು ಯಾಗ ಸಮಿತಿ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ 4 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಯಾಗಕ್ಕೆ ಆಗಮಿಸುತ್ತಿರುವ 180 ಋತ್ವಿಜರು ವಾಸ ಮಾಡಲು ಎಲ್ಲಾ ವ್ಯವಸ್ಥೆಯುಳ್ಳ ಈಶಾವಾಸ್ಯಂ ವಸತಿಗೃಹ ನಿರ್ಮಿಸಲಾಗಿದೆ. 12 ದಿನಗಳ ಕಾಲ ಜರಗುವ ಯಾಗದಲ್ಲಿ 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಗೆ ಬೇಕಾಗುವ ಭೋಜನ ವ್ಯವಸ್ಥೆಗೆ ’’ಸೀತಾರಸೊಯಿ’ ಪಾಕಶಾಲೆ, ಅನ್ನಪೂರ್ಣ ಭೋಜನ ಶಾಲೆ, ಉಗ್ರಾಣ ಸಜ್ಜಾಗಿದೆ. ಪ್ರತೀ ದಿನ ಸಾಯಂಕಾಲ 5 ಗಂಟೆಯಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸುಮಾರು 3,000 ಜನರು ಆಸಿನರಾಗಲು ಭಾರತೀತೀರ್ಥ ಸಭಾ ಮಂಟಪದ ರಚನೆಯಾಗಿದೆ. ಪ್ರತೀದಿನ ಸಾಯಂಕಾಲ 4 ರಿಂದ ಗ್ರಾಮವಾರು ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ದಿನೇಶ್ ಪ್ರಭು, ಉಮಾಮಹೇಶ್ವರ ದೇವಸ್ತಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ ಠಾಕೂರ್, ಟ್ರಸ್ಟಿ ಸಂಜಯ ಪ್ರಭು, ಮಹಾಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಕ್ಕೆಹಳ್ಳಿ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಕಾರ್ಯಾಲಯ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಕೋಶಾಧಿಕಾರಿ ಸತೀಶ್ ಪಾಟೀಲ್ ಉಪಸ್ಥಿತರಿದ್ದರು.