

ಉಡುಪಿ: ಮಣಿಪಾಲ ಸಮೀಪದ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ. 22ರಿಂದ ಆರಂಭಗೊಂಡ ಅತಿರುದ್ರ ಮಹಾಯಾಗ ಭಾನುವಾರ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠಾಧೀಶ್ವರ ಶ್ರೀ ವಿಧುಶೇಖರಭಾರತೀ ಸ್ವಾಮೀಜಿಯವರ ಸಾನಿಧ್ಯದಲ್ಲಿ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.
ಯಾಗ ಪೂರ್ಣಾಹುತಿ ಬಳಿಕ ಶೃಂಗೇರಿ ಶ್ರೀಗಳು ಕ್ಷೇತ್ರದ ಅಧಿದೇವತೆ ಉಮಾಮಹೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಪ್ರಧಾನ ಕಲಶಾಭಿಷೇಕ ನಡೆಸಿದರು. ಬಳಿಕ ನೆರೆದ ಎಲ್ಲ ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಪಲ್ಲಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ‌್ಯಕ್ರಮದಂಗವಾಗಿ ಪ್ರಸಿದ್ಧ ಕಲಾವಿದರಿಂದ ‘ಕಾಶ್ಮೀರ ವಿಜಯ’ ಯಕ್ಷಗಾನ ತಾಳಮದ್ದಲೆ ನಡೆಯಿತು.
12 ದಿನದ ಯಾಗ
ಪ್ರತಿದಿನ 11 ಕುಂಡಗಳಲ್ಲಿ ತಲಾ 11 ಮಂದಿಯಂತೆ ಒಟ್ಟು 121 ಮಂದಿ ಋತ್ವಿಜರು 12 ದಿನ ರುದ್ರಪಠಣದೊಂದಿಗೆ ಯಾಗ ನೇರವೇರಿಸಿದ್ದಾರೆ. ಶೃಂಗೇರಿ ಮಠದ ಉಡುಪಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ ಶಾಸ್ತ್ರಿ ನೇತೃತ್ವದಲ್ಲಿ ಶೃಂಗೇರಿ ಸಹಿತ ನಾಡಿನ ವಿವಿಧೆಡೆಗಳಿಂದ ಸುಮಾರು 200 ಮಂದಿ ಋತ್ವಿಜರು ಆಗಮಿಸಿ, ಶಿವಪಾಡಿಯಲ್ಲೇ ವಾಸ್ತವ್ಯ ಹೂಡಿದ್ದರು. ಶೃಂಗೇರಿ ಸಂಸ್ಕೃತ ಮಹಾಪಾಠಶಾಲೆ ಅಧ್ಯಕ್ಷ ವಿನಾಯಕ ಉಡುಪ ಪ್ರಧಾನ ಆಚಾರ‌್ಯತ್ವದಲ್ಲಿ ಯಾಗ ನಡೆದಿದ್ದು, ನಿತ್ಯ ಪೂಜೆಗಾಗಿ ಶೃಂಗೇರಿಯಿಂದ ಸ್ಪಟಿಕ ಶಿವಲಿಂಗ ತರಲಾಗಿತ್ತು.