

ವಿಜಯವಾಣಿ ಸುದ್ದಿಜಾಲ ಗದಗ
ಶರಣರು, ಸಂತರು, ದಾಸರು ಅತ್ಯಂತ ಪವಿತ್ರವಾಗಿರುವ ಜೀವನವನ್ನು ನಡೆಸಿ ತಮ್ಮ ಬದುಕಿನಿಂದ ವಿಶಿಷ್ಟವಾದ ಸಂದೇಶವನ್ನು ನೀಡಿದ್ದಾರೆ. ಮಹಾತ್ಮರಲ್ಲಿ, ಶರಣರಲ್ಲಿ, ಸಂತರಲ್ಲಿ ಯಾವುದೇ ಜಾತಿಯನ್ನು ಗುರುತಿಸಬಾರದು. ಅವರಲ್ಲಿರುವ ಜ್ಞಾನ ಬಹಳ ಮುಖ್ಯ ಎಂದು ತೋಂಟದ ಸಿದ್ಧರಾಮ ಶ್ರೀಗಳು ತಿಳಿಸಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ನಮ್ಮ ಜಾತಿಗಳೇ ಶ್ರೇಷ್ಠ ಎಂದು ಹೋರಾಟಗಳು ನಡೆಯುತ್ತಿವೆ. ಶರಣರ, ಮಹಾತ್ಮರ ದೃಷ್ಟಿಯಲ್ಲಿ ಯಾರು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾರೆ ಅವರೇ ಶ್ರೇಷ್ಠ ಜಾತಿಯವರು. ನಾವು ಶ್ರೇಷ್ಠರು ಎನಿಸಿಕೊಳ್ಳಬೇಕಾದರೆ ಎಲ್ಲರಿಗೂ ಒಳ್ಳೆಯದನ್ನು ಮಾಡಬೇಕಾಗುತ್ತದೆ. ಶರಣರು ತಮ್ಮ ವಚನಗಳ ಮೂಲಕ ಮಾನವೀಯ ಮೌಲ್ಯಗಳನ್ನು ಪ್ರಸಾರ ಮಾಡಿದರು. ದಾಸರು ಮತ್ತು ಶರಣರ ಮೂಲ ಉದ್ಧೇಶ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಆತ್ಮಭೋಧೆಯನ್ನು ಮಾಡುವಂತದ್ದು ಎಂದು ಶ್ರೀಗಳೂ ಹೇಳಿದರು.
ಕನಕದಾಸರ ಜೀವನ ಸಂದೇಶ ಕುರಿತು ನಿವೃತ್ತ ಡಿವೈಎಸ್ಪಿ ಡಿ. ಡಿ. ಮಾಳಗಿ ಮಾತನಾಡಿ, ತಾತ್ವಿಕವಾಗಿ ಕನಕದಾಸರ ಚಿಂತನೆಗಳ ಬಗ್ಗೆ, ತತ್ತ್ವ ಸಿದ್ಧಾಂತಗಳ ಬಗ್ಗೆ, ಸಾಹಿತ್ಯದ ಬಗ್ಗೆ, ಸಂಗೀತದ ಬಗ್ಗೆ ಇಂದು ಯಾರೂ ವಿಚಾರ ಮಾಡುತ್ತಿಲ್ಲ. ಕನ್ನಡ ಸಾಹಿತ್ಯದಲ್ಲಿ ಅಚ್ಚಳಿಯದೆ ತ್ರಿಕಾಲಾದಿತವಾಗಿ ನಿಂತ ಸಾಹಿತ್ಯ ಕನಕದಾಸ ಸಾಹಿತ್ಯ. 12 ನೇ ಶತಮಾನದಲ್ಲಿ ಶರಣರು ಸಮಾನತೆಯ ಬಂಡಾಯವನ್ನು ಸಾರಿದರೆ, 16 ನೇ ಶತಮಾನದಲ್ಲಿ ದಾಸರಲ್ಲಿ ಕನಕದಾಸರೊಬ್ಬರೆ ಬಂಡಾಯ ಸಾರಿದ್ದಾರೆ ಎಂದು ತಿಳಿಸಿದರು.
ಡಾ. ಜಿ. ಬಿ. ಬಿಡಿನಹಾಳ, ಡಾ. ಸಂಜೀವ ಹರಳಯ್ಯ, ಡಾ. ಶೈಲಜಾ ಮುದೇನಗುಡಿ, ಪ್ರೊ. ಮುಕ್ತಾ ಪಾಟೀಲ, ಪ್ರೊ. ನೀತಾ ಮುದರಡ್ಡಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.
ಸಾನ್ನಿಧ್ಯವನ್ನು ಗುರುಬಸವಲಿಂಗ ಶ್ರೀಗಳು, ದುರದುಂಡೀಶ್ವರ ಸಿದ್ಧಸಂಸ್ಥಾನಮಠದ ಪುಣ್ಯಾರಣ್ಯ ಅರಭಾವಿಮಠ, ವಿವೇಕಾನಂದಗೌಡ ಪಾಟೀಲ, ಕೀರಪ್ಪ ಹೆಬಸೂರ, ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಹುಚ್ಚಣ್ಣ ರೇವಣೆಪ್ಪ ಶಹಾಪೂರ ಇತರರು ಇದ್ದರು.